ಎಲ್.ಜಿ.ಹಾವನೂರು ಜಯಂತಿ 
ಮೈಸೂರು

ಹಿಂದುಳಿದ ವರ್ಗಗಳನ್ನು ಬೆಳಕಿಗೆ ತಂದ ಹಾವನೂರು

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಅಭಿಪ್ರಾಯ
ಮೈಸೂರು: ಶ್ರೀ ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ವತಿಯಿಂದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಹಿಂದುಳಿದ ವರ್ಗಗಳ ಹರಿಕಾರ ಎಲ್.ಜಿ.ಹಾವನೂರು ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಹಾವನೂರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್, ಎಲ್.ಜಿ.ಹಾವನೂರು ಅವರು ನಾಡು ಕಂಡ ಶ್ರೇಷ್ಠ ನ್ಯಾಯವಾದಿ. ತೀಕ್ಷ್ಣ, ದೂರದೃಷ್ಟಿಯುಳ್ಳ ರಾಜಕೀಯ ಮುತ್ಸದ್ದಿ, ಸಮಾಜ ಸೇವೆಗೆ ತನ್ನ ಜೀವನ ಮುಡುಪಾಗಿಟ್ಟವರು ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹಾವನೂರು ವರದಿಯನ್ನು ಸಲ್ಲಿಸಿ ಹಿಂದುಳಿದ ಜಾತಿಯವರಿಗೆ ಮೀಸಲಾತಿ ಕಲ್ಪಿಸಿ ಅವರ ಅಭಿವೃದ್ಧಿಗೆ ಕಾರಣರಾದರು. ಕಗ್ಗತ್ತಲಲ್ಲಿದ್ದ ಹಿಂದುಳಿದ ವರ್ಗಗಳ ಜನರನ್ನು ಬೆಳಕಿಗೆ ತಂದರು ಎಂದು ತಿಳಿಸಿದರು.
ಬಾಂಬೆ ರಾಜ್ಯದ ಮೊತ್ತಮೊದಲ ಎಲ್‌ಎಲ್‌ಬಿ ಪದವೀಧರರು. 1953ರಲ್ಲಿ ಬಾಂಬೆಯಲ್ಲಿ ಅಂಬೇಡ್ಕರ್ ಅವರೊಂದಿಗೆ ವಕಾಲತ್ತು ಪ್ರಾರಂಭಿಸಿದರು. ಬಳಿಕ ಬೆಂಗಳೂರು ಹೈಕೋರ್ಟ್‌ನಲ್ಲಿ ತಮ್ಮ ವೃತ್ತಿ ಮುಂದುವರಿಸಿದರು. ಉತ್ತಮ ಸಂವಿಧಾನ ತಜ್ಞರೆಂದು ಖ್ಯಾತ ಪಡೆದಿದ್ದರೆಂದು ಚಿಂತಕರು ತಿಳಿಸಿದ್ದಾರೆ. ಸಂಸತ್ ಸದಸ್ಯರಾಗಿಯೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ಅಧ್ಯಕ್ಷ ಪು.ಶ್ರೀನಿವಾಸನಾಯಕ, ನಾಯಕ ಹಿತರಕ್ಷಣ ಸಮಿತಿ ಅಧ್ಯಕ್ಷ ಚಾಮುಂಡಿ ಬೆಟ್ಟ ಶ್ರೀಧರ್, ಸಂಚಾಲಕ ಹುಣಸೂರು ಪ್ರಭಾಕರ್, ವಕೀಲರಾದ ತಿಮ್ಮಯ್ಯ, ಎಚ್.ಎಸ್ ಪುಟ್ಟರಸ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಕೇಶವ, ಕುಮಾರಬೀಡು ಸುರೇಶ, ಬಂಡಳ್ಳಿ ಕುಮಾರ್, ಹೊಸರಾಮನಹಳ್ಳಿ ಮಂಚನಾಯಕ, ನಗರ ಪಾಲಿಕೆ ಮಾಜಿ ಸದಸ್ಯ ಸತೀಶ್ ಮತ್ತಿತರರು ಹಾಜರಿದ್ದರು.
ಫೋಟೋ (ಮಾ.24, ಸ್ಕಾೃನ್-21)
ಜಲದರ್ಶಿನಿ ಅತಿಥಿಗೃಹದಲ್ಲಿ ಆಯೋಜಿಸಿದ್ದ ಎಲ್.ಜಿ.ಹಾವನೂರು ಜಯಂತಿಯಲ್ಲಿ ಎನ್.ಭಾಸ್ಕರ್, ಪು.ಶ್ರೀನಿವಾಸನಾಯಕ, ಶ್ರೀಧರ್, ಪ್ರಭಾಕರ್, ತಿಮ್ಮಯ್ಯ ಇದ್ದರು.