ಮೀನು ಕೃಷಿಯಲ್ಲಿ ತೊಡಗಿರುವ ಜವರನಾಯಕ 
ಮೈಸೂರು

ಮೀನುಗಾರಿಕೆಯಲ್ಲಿ ಖುಷಿ ಜೀವನ

ಪ್ರಮುಖ ಮುಖ್ಯಾಂಶಗಳು

  • ಜವರನಾಯಕರಿಂದ ಮರೆಲ್ ಮೀನು ಸಾಕಾಣಿಕೆ
  • ಮೈಸೂರಿನ ಕುಮಾರಬೀಡು ಗ್ರಾಮದಲ್ಲಿ ಕೃಷಿ
  • ಮೀನುಗಾರಿಕೆಗೆ 2 ಕೆರೆಗಳ ನಿರ್ಮಾಣ
ಸದೇಶ್ ಕಾರ್ಮಾಡ್ ಮೈಸೂರು
ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ರೈತರು ಕಾಟ್ಲಾ ಹಾಗೂ ಜಿಲೇಬಿ ಮೀನನ್ನು ಹೆಚ್ಚಾಗಿ ಸಾಕಾಣಿಕೆ ಮಾಡುತ್ತಾರೆ. ಮಾರುಕಟ್ಟೆಯಲ್ಲೂ ಈ ಮೀನುಗಳು ಹೆಚ್ಚಾಗಿ ಕಂಡು ಬರುತ್ತದೆ. ಆದರೆ, ಜಿಲ್ಲೆಯ ಕುಮಾರಬೀಡು ಗ್ರಾಮದ ರೈತ ಜವರನಾಯಕ ‘ಮರೆಲ್’ ಎಂಬ ವಿಶೇಷ ತಳಿಯ ಮೀನು ಸಾಕಾಣಿಕೆ ಮಾಡಿ ಯಶಸ್ಸು ಕಂಡಿದ್ದಾರೆ.
ಕಳೆದ 2 ವರ್ಷಗಳಿಂದ ಕುಮಾರಬೀಡು ಗ್ರಾಮದಲ್ಲಿ ಜವರನಾಯಕ ಅವರು ಮೀನು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 10 ಸಾವಿರ ಮತ್ತು 11 ಸಾವಿರ ಚದರ ಅಡಿಯ 2 ಕೆರೆಗಳನ್ನು ನಿರ್ಮಾಣ ಮಾಡಿ ಮರೆಲ್ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. 2 ಕೆರೆಯಲ್ಲಿ ಒಂದು ಬಾರಿಗೆ ಒಟ್ಟು 6 ಸಾವಿರ ಮೀನು ಮರಿಗಳನ್ನು ಬಿಡಲಾಗುತ್ತದೆ. ಮರೆಲ್ ಮೀನನ್ನು ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯದಲ್ಲಿ ಹೆಚ್ಚಾಗಿ ಸಾಕಾಣಿಕೆ ಮಾಡುತ್ತಾರೆ. ಜವರನಾಯಕ ಅವರು ಕೇರಳ ಹಾಗೂ ಆಂಧ್ರಪ್ರದೇಶದಿಂದ ಮೀನುಮರಿಗಳನ್ನು ತರಿಸಿಕೊಂಡು ಸಾಕಾಣಿಕೆ ಮಾಡಿ ಅದರಿಂದ ಉತ್ತಮ ಜೀವನ ನಡೆಸುತ್ತಿದ್ದಾರೆ. ಇವರು ಸಾಕಾಣಿಕೆ ಮಾಡುತ್ತಿರುವ ಮೀನನ್ನು ಚೆನ್ನೈನಿಂದ ವರ್ತಕರು ಆಗಮಿಸಿ ನೇರವಾಗಿ ಖರೀದಿಸುತ್ತಾರೆ. ಹೀಗಾಗಿ ಮಾರುಕಟ್ಟೆಯ ತಲೆನೋವು ಇಲ್ಲ.
‘ಕಾಟ್ಲಾ ಹಾಗೂ ಜಿಲೇಬಿಗೆ ಹೋಲಿಕೆ ಮಾಡಿದರೆ ಮರೆಲ್ ಮೀನಿನಿಂದ ಹೆಚ್ಚು ಲಾಭ ದೊರೆಯುತ್ತದೆ. ಅಲ್ಲದೆ, ನಿರ್ವಹಣೆಯ ವೆಚ್ಚವೂ ಕಡಿಮೆ. ಒಂದುವೇಳೆ ಚೆನ್ನೈ ವರ್ತಕರು ಮೀನು ಖರೀದಿಸದೆ ಇದ್ದರೆ ಸ್ಥಳೀಯವಾಗಿಯೂ ಮಾರುಕಟ್ಟೆಯನ್ನು ಕಂಡುಕೊಳ್ಳಬ ಹುದು. ಈ ಮೀನು ಅತ್ಯಂತ ರುಚಿಕರವಾಗಿದ್ದು, ಮುಳ್ಳು ಇರುವುದಿಲ್ಲ. ಹೀಗಾಗಿ ಜನರು ಇಷ್ಟಪಟ್ಟು ಖರೀದಿಸುತ್ತಾರೆ’ ಎಂಬುದು ಜವರನಾಯಕ ಅವರ ವಿಶ್ವಾಸದ ಮಾತು. ಇವರ ಕೃಷಿ ಸಾಧನೆಯನ್ನು ಕಂಡು ನಾಡಹಬ್ಬ ದಸರಾ ಉತ್ಸವದಲ್ಲಿ ಮೀನುಗಾರಿಕೆ ಇಲಾಖೆಯಿಂದ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.