ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಗೆ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದರು.
- ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಂಭ್ರಮ
ಮೈಸೂರು: ಚೈತ್ರ ಶುದ್ಧ ಹುಣ್ಣಿಮೆ ಅಂಗವಾಗಿ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಹನುಮ ಜಯಂತಿಯನ್ನು ಗುರುವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಈ ಪವಿತ್ರ ದಿನದಂದು ಆಶ್ರಮದ ಕಿರಿಯ ಪೀಠಾಧಿಪತಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಭಕ್ತಾದಿಗಳಿಗೆ ವಿಶೇಷ ಸಂದೇಶ ನೀಡಿದರು. ಹನುಮ ಜಯಂತಿ ಪ್ರಯುಕ್ತ ಕಾರ್ಯಸಿದ್ಧಿ ಹನುಮಂತನಿಗೆ ವಿಶೇಷ ‘ವಜ್ರಾಲಂಕಾರ’ ಮಾಡಲಾಗಿತ್ತು. ಬಜರಂಗಿ ಎಂದರೆ ವಜ್ರಾಂಗಿ ಎಂದರ್ಥ.
ಸ್ವಾಮಿಯು ಭಕ್ತರಿಗೆ ವಜ್ರದಂತಹ ದೈಹಿಕ ಸಾಮರ್ಥ್ಯವನ್ನು ಮತ್ತು ಹೂವಿನಂತಹ ಮೃದುವಾದ ಮನಸ್ಸನ್ನು ಕರುಣಿಸಲಿ ಎಂದು ಸ್ವಾಮೀಜಿ ಹಾರೈಸಿದರು.
ಈ ಸಂದರ್ಭದಲ್ಲಿ ಹನುಮಂತನಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಭಕ್ತಾದಿಗಳಿಗೆ ವೀಳ್ಯದೆಲೆ ಅರ್ಚನೆಯ ವಿಶೇಷತೆ ವಿವರಿಸಿದ ಸ್ವಾಮೀಜಿ, ವೀಳ್ಯದೆಲೆಯು ನಮ್ಮ ಹೃದಯದ ಸಂಕೇತ. ನಮ್ಮ ಮನಸ್ಸು ಮತ್ತು ಹೃದಯವನ್ನು ಸ್ವಾಮಿಗೆ ಅರ್ಪಿಸುವುದೇ ಈ ಅರ್ಚನೆಯ ಮೂಲ ಉದ್ದೇಶ ಎಂದು ತಿಳಿಸಿಕೊಟ್ಟರು. ಸೀತಾಮಾತೆಯು ಅಶೋಕವನದಲ್ಲಿದ್ದಾಗ ಹನುಮಂತನಿಗೆ ವೀಳ್ಯದೆಲೆಯಿಂದ ಆಶೀರ್ವದಿಸಿದ ನೆನಪಿಗಾಗಿ ಈ ಪದ್ಧತಿ ಬೆಳೆದು ಬಂದಿದೆ. ಇದು ಭಕ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಶ್ರೀಗಳು ತಿಳಿಸಿದರು.
ಕಾರ್ಯಸಿದ್ಧಿ ರಕ್ಷೆ ಮತ್ತು 13ರ ಮಂತ್ರ:
ಸೇವಾರ್ಥಿಗಳಿಗೆ 13 ಗಂಟುಗಳಿರುವ ವಿಶೇಷ ಕಾರ್ಯಸಿದ್ಧಿ ರಕ್ಷೆಯನ್ನು ವಿತರಿಸಲಾಯಿತು.
ಈ ಬಗ್ಗೆ ಮಾತನಾಡಿದ ಶ್ರೀಗಳು, 13 ಎಂಬ ಸಂಖ್ಯೆಯು ‘ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ಮಂತ್ರದ ಸಂಕೇತ. ಸೀತಾಮಾತೆಯು ಸುಂದರಕಾಂಡದಲ್ಲಿ ಹೇಳಿರುವ ಮಂತ್ರವನ್ನೇ ಜಪಿಸುತ್ತಾ, ಈ ರಕ್ಷೆಯನ್ನು ಧರಿಸಿ 16 ದಿನಗಳ ಕಾಲ ಸ್ವಾಮಿಗೆ ಪ್ರದಕ್ಷಿಣೆ ಹಾಕುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗಿ ಕಾರ್ಯಸಿದ್ಧಿಯಾಗುವುದು ಖಂಡಿತ ಎಂದು ಹೇಳಿ ಭಕ್ತರಿಗೆ ಆಶೀರ್ವಚನ ನೀಡಿದರು.
ಆಶ್ರಮದ ಹಿರಿಯ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವರ್ಷದಲ್ಲಿ ಆರು ಹನುಮ ಜಯಂತಿ ಆಚರಿಸಲಾಗುತ್ತದೆ. ಈ ಬಾರಿಯ ಚೈತ್ರ ಪೂರ್ಣಿಮೆಯಂದು ನಡೆದ ಹನುಮಜಯಂತಿ ಆಚರಣೆಯಲ್ಲಿ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.