ಸಾಲಿಗ್ರಾಮ ಪಟ್ಟಣದಲ್ಲಿ ಹನುಮ ಜಯಂತ್ಯುತ್ಸವ ವಿಜೃಂಭಣೆಯಿಂದ ನಡೆಯಿತು.
ಸಾಲಿಗ್ರಾಮ: ಪಟ್ಟಣದಲ್ಲಿ ಶ್ರೀ ಪೇಟೆ ಆಂಜನೇಯ ಸ್ವಾಮಿ ಯುವಕರ ಸಂಘದಿಂದ ನಾಲ್ಕನೇ ವರ್ಷದ ಹನುಮ ಜಯಂತ್ಯುತ್ಸವ ಅದ್ದೂರಿಯಾಗಿ ನಡೆಯಿತು.
ಪೇಟೆ ಆಂಜನೇಯನಿಗೆ ಸಂಘದ ಪದಾಧಿಕಾರಿಗಳು ಭಾಸ್ಕರ್ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕ ಧನುರ್ದಾಸ್ ಐಯ್ಯಂಗಾರ್ ಮತ್ತು ಸಾರ್ವಜನಿಕರೊಂದಿಗೆ ಬೆಣ್ಣೆ ಅಲಂಕಾರ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು. ನಂತರ ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಿದರು. ಸರತಿ ಸಾಲಿನಲ್ಲಿ ನಿಂತು ಆಂಜನೇಯನ ದರ್ಶನ ಪಡೆದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗ್ರಾಮದಲ್ಲಿರುವ ವಿವಿಧ ಆಂಜನೇಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು. ಆಂಜನೇಯ ಮೂರ್ತಿ, ಉತ್ಸವ ಆಂಜನೇಯ, ಶ್ರೀ ರಾಮನ ಪ್ರತಿಮೆ, ಗಣಪತಿ ಪ್ರತಿಮೆ, ವೀರಾಂಜನೇಯ ಪ್ರತಿಮೆ ಸೇರಿದಂತೆ ವಿವಿಧ ದೇವರ ಪ್ರತಿಮೆಗಳನ್ನು ತೆರೆದ ವಾಹನದಲ್ಲಿ ಕೂರಿಸಿ, ಚುಂಚನಕಟ್ಟೆ ರಸ್ತೆ, ರಾಮನಾಥಪುರ ರಸ್ತೆ, ಮಹಾವೀರ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ವಿವಿಧ ಆಂಜನೇಯ ಸ್ವಾಮಿ ಯುವಕ ಸಂಘದವರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಆಂಜನೇಯನ ಭಕ್ತರು ಮೆರವಣಿಗೆ ಉದ್ದಕ್ಕೂ ಪ್ರಸಾದ ವಿನಿಯೋಗ ಮಾಡಿದರು. ಮೆರವಣಿಗೆಯಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.