ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಡಾ.ಪಿ. ಜಯಚಂದ್ರರಾಜು, ಟಿ. ಸತೀಶ್‌ಜವರೇಗೌಡ, ಡಾ. ಗುಣವಂತ ಮಂಜು, ಎಸ್. ಕಣ್ಣನ್ ಇತರರು ಇದ್ದರು.
- ವಿವಿಧ ಪ್ರಕಾರದ ಸಾಹಿತ್ಯಾತ್ಮಕ ಪುಸ್ತಕಗಳ ಮತ್ತು ದಿನಪತ್ರಿಕೆಗಳ ಓದಿನಿಂದ ವಿಚಾರಶೀಲತೆ ಬೆಳೆಯುವುದು
- ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಚಿಂತನ ಕ್ರಮವನ್ನು ಮೊನಚು ಮಾಡಿಕೊಳ್ಳಬೇಕು
ಮೈಸೂರು:ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಠ್ಯಪುಸ್ತಗಳಿಗೆ ಸೀಮಿತವಾಗಿ ಜ್ಞಾನವಂತರೂ ಪ್ರತಿಭಾವಂತರೂ ಆದರೆ ಸಾಲದು. ವಿಚಾರಶೀಲರೂ ಆಗಬೇಕು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿ ವಿಚಾರಗೋಷ್ಠಿ ಹಾಗೂ ಉಚಿತ ನೋಟ್‌ಬುಕ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ವಿವಿಧ ಪ್ರಕಾರದ ಸಾಹಿತ್ಯಾತ್ಮಕ ಪುಸ್ತಕಗಳ ಮತ್ತು ದಿನಪತ್ರಿಕೆಗಳ ಓದಿನಿಂದ ವಿಚಾರಶೀಲತೆ ಬೆಳೆಯುವುದು. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಚಿಂತನ ಕ್ರಮವನ್ನು ಮೊನಚು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದು ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಕೈಬರಹದ ಕಲೆಯೇ ಕ್ಷೀಣವಾಗಿದೆ. ನಮ್ಮ ವಿಚಾರಗಳನ್ನು ಡಿಜಿಟಲ್ ಸಾಧನಗಳಲ್ಲಿ ದಾಖಲಿಸಿ ಸಂಗ್ರಹಿಸುವ ಬದಲು ಕಾಗದದಲ್ಲಿ ದಾಖಲಿಸಿಡಬೇಕು. ಕೈಬರಹವೇ ಸಶಕ್ತ ಅಭಿವ್ಯಕ್ತಿ ಮಾಧ್ಯಮ. ನಮ್ಮ ಹಿರಿಯರು ಬಂಡೆಗಲ್ಲು, ತಾಮಪತ್ರ, ತಾಳೆಗರಿ, ಕಾಗದಗಳಲ್ಲಿ ಬರವಣಿಗೆ ಮಾಡದಿದ್ದರೆ ಇತಿಹಾಸ ಬರೆಯಲಾಗುತ್ತಿರಲಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಪಿ. ಜಯಚಂದ್ರರಾಜು ಮಾತನಾಡಿ, ವಿದ್ಯಾರ್ಥಿಗಳು ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸಿಕೊಂಡು ಯಾವುದೇ ಭಯವಿಲ್ಲದೆ ಮಾತನಾಡುವ ಸಾಮರ್ಥ್ಯ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ರಾಧೆ ಪುಸ್ತಕ ಸಂಗ್ರಹ ಮಂದಿರದ ಸಂಸ್ಥಾಪಕ ಜಿ.ಆರ್.ರಾಜೇಶ್ ನಾಯಕ ಮಾತನಾಡಿ, ಮೊಬೈಲ್ನ ಮಿತಿಮೀರಿದ ಬಳಕೆ ‘ಸಾಮಾಜಿಕ ಕಾಯಿಲೆ’ಯಾಗಿದೆ. ಇದಕ್ಕೆ ಮೂಲವಾದ ಮೊಬೈಲ್ ಮಾದಕ ವಸ್ತುವಿದ್ದಂತೆ. ಅದರ ನಶೆಗೆ ಮಕ್ಕಳು ಮತ್ತು ಪಾಲಕರಿಬ್ಬರೂ ಒಳಗಾಗಿದ್ದಾರೆ. ಇದರಿಂದ ನೆನಪಿನ ಶಕ್ತಿಯೂ ಕ್ಷೀಣವಾಗಿದೆ. ಈ ಕಾಯಿಲೆಯಿಂದ ಮುಕ್ತರಾಗಲು ಪುಸ್ತಕಗಳ ಜತೆಗೆ ಒಡನಾಟ ಬೆಳೆಸಿಕೊಳ್ಳಬೇಕು ಎಂದರು.
ಸಮಾಜ ಸೇವಕ ಹಾಗೂ ಪತ್ರಕರ್ತ ಎಸ್.ಕಣ್ಣನ್ ದಂಪತಿಯನ್ನು ಇದೇ ವೇಳೆ ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಸತೀಶ್ ಕುಮಾರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಗೌಡಯ್ಯ, ಕಲಾವಿದೆ ಯದುಗಿರಿ ಗೋಪಾಲನ್, ಕಾಲೇಜಿನ ಪ್ರಾಂಶುಪಾಲ ಅಭಿಷೇಕ್ ಇದ್ದರು.