ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಕೈ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಉದ್ಘಾಟಿಸಿದರು. ಡಾ. ಸುಮನಾ, ಡಾ.ಡಿ.ಶ್ರೀನಿವಾಸ್ ಮೂರ್ತಿ, ಡಾ. ಕೆ.ಬಿ.ಚೇತಕ್, ಜಾನೆಟ್ ಮಥಿಯಾಸ್ ಇದ್ದರು.
- ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಮಾಹಿತಿ
ಮೈಸೂರು: ಆರೋಗ್ಯಕರ ಜೀವನಕ್ಕೆ ಕೈಗಳ ಸ್ವಚ್ಛತೆಗೆ ಪ್ರಧಾನ ಆದ್ಯತೆ ನೀಡಬೇಕು. ಇದು ಕಾಯಿಲೆಗಳನ್ನು ತಡೆಯುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಹೇಳಿದರು.
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಕೈ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೋಂಕು ಅಥವಾ ಕೀಟಾಣು ದೇಹ ಪ್ರವೇಶಿಸುವುದು ಕೈಗಳ ಮೂಲಕ. ಆದ್ದರಿಂದಲೇ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ವೈದ್ಯರು ರೋಗಿಯನ್ನು ಮುಟ್ಟುವ ಮುನ್ನ ಮತ್ತು ನಂತರ ಕೈ ಸ್ವಚ್ಛಗೊಳಿಸಿಕೊಳ್ಳಬೇಕು. ಇದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಕಡಿಮೆ. ಈ ಅಭ್ಯಾಸವನ್ನು ಎಲ್ಲ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು. ಇದರ ಬಗ್ಗೆ ಜಾಗೃತಿ ಮತ್ತು ಅರಿವು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಆಸ್ಪತ್ರೆಯ ಉಪ ನಿರ್ದೇಶಕಿ ಡಾ. ಸುಮನಾ ಮಾತನಾಡಿ, ರೋಗ ಹರಡುವುದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಕೈಗಳನ್ನು ಸ್ವಚ್ಛಗೊಳಿಸಕೊಳ್ಳಬೇಕು. ಆಸ್ಪತ್ರೆಯಲ್ಲಿ ನರ್ಸ್‌ಗಳ ಪಾತ್ರ ಬಹಳ ಪ್ರಮುಖವಾದದ್ದು, ಅವರು ವಾರ್ಡ್‌ಗೆ ಪ್ರವೇಶಿಸುವ ವೈದ್ಯರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೈ ನೈರ್ಮಲ್ಯ ಬಗ್ಗೆ ಜಾಗೃತಿ ಮೂಡಿಸಬೇಕು. ಕಡ್ಡಾಯವಾಗಿ ಕೈ ತೊಳೆಯಲು ಹೇಳಬೇಕು ಎಂದರು.
ಕೈ ನೈರ್ಮಲ್ಯ ಬಗ್ಗೆ ಅವರು ಸ್ವರಚಿತ ಹಾಡಿನ ಮೂಲಕ ಕೈ ತೊಳೆಯುವ ವಿಧಾನ ತಿಳಿಸಿದರು.
ಜೆಎಸ್‌ಎಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಡಿ.ಶ್ರೀನಿವಾಸ್ ಮೂರ್ತಿ ಮಾತನಾಡಿ, ಕೈ ನೈರ್ಮಲ್ಯ ಎಂಬ ಪದ ಚಿಕ್ಕ ವಿಷಯವಾಗಿದ್ದರೂ ಇದು ಸಾವನ್ನು ತಪ್ಪಿಸುತ್ತದೆ. ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು.
ಸೋಂಕು ಇರುವ ವ್ಯಕ್ತಿಯನ್ನು ಮುಟ್ಟಿ ಆ ಸೋಂಕು ನಮ್ಮ ಕೈಗಳಿಂದ ಮತ್ತೊಬ್ಬರಿಗೆ ಹರಡಿ ಅವರ ಪ್ರಾಣಕ್ಕೆ ಕುತ್ತಾಗಬಹುದು. ಆದ್ದರಿಂದ ನಮಗೋಸ್ಕರ ಮತ್ತು ಬೇರೆಯವರಿಗೋಸ್ಕರ ನಾವು ನಮ್ಮ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಕೈಗಳನ್ನು ಸ್ವಚ್ಛಗೊಳಿಸುವುದು ಪ್ರಾಥಮಿಕ ಮತ್ತು ಸುಲಭವಾದ ಮಾರ್ಗವಾಗಿದೆ. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಹರಡುವಿಕೆಯನ್ನು ತಡೆಯುವ ಮೂಲಕ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಎಂದರು.
ಆಸ್ಪತ್ರೆಯ ಸೋಂಕು ನಿಯಂತ್ರಣ ಸಮಿತಿಯ ಕಾರ್ಯದರ್ಶಿ ಡಾ. ಕೆ.ಬಿ.ಚೇತಕ್, ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಜಾನೆಟ್ ಮಥಿಯಾಸ್ ಇನ್ನಿತರರು ಉಪಸ್ಥಿತರಿದ್ದರು.