ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿ ಕಳ್ಳತನ ಮಾಡಿರುವ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. 
ಮೈಸೂರು

ದೇಗುಲಕ್ಕೆ ಕನ್ನ ಹಾಕಿದ್ದ ಇಬ್ಬರ ಸೆರೆ

ರಾಜಣ್ಣ

ಹನಗೋಡು:

ಮಧ್ಯರಾತ್ರಿ ದೇವಾಲಯದಲ್ಲಿ ಹಣ ಹಾಗೂ ಪೂಜಾ ಸಾಮಗ್ರಿ ಕಳವು ಮಾಡಿ, ಮತ್ತೊಂದು ದೇಗುಲದ ಬೀಗ ಒಡೆಯಲು ಯತ್ನಿಸುತ್ತಿದ್ದ ನಾಲ್ವರು ಕಳ್ಳರ ಪೈಕಿ ಇಬ್ಬರನ್ನು ಗ್ರಾಮಸ್ಥರೇ ಹಿಡಿದು ಮಂಗಳವಾರ ರಾತ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಣಸೂರು ತಾಲೂಕಿನ ಹೆಬ್ಬಾಳ ಹಾಗೂ ನೇರಳಕುಪ್ಪೆ ಗ್ರಾಮದಲ್ಲಿ ಆರೋಪಿಗಳಿಂದ ಪೊಲೀಸರು ಕಾರು ಹಾಗೂ ಕದ್ದಿರುವ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕೆಸರೆ ಬಡಾವಣೆಯ ಮಹಮ್ಮದ್ ಅನಾಸ್ ಅದಿಲ್ ಹಾಗೂ ಡೇನಿಯಲ್ ಬಂಧಿತರು. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ನಾಲ್ವರು ಆರೋಪಿಗಳು ಹೆಬ್ಬಾಳ ಗ್ರಾಮದ ಓಂಕಾರೇಶ್ವರ ದೇವಾಲಯದ ಬೀಗ ಒಡೆದು ನುಗ್ಗಿ, ಹುಂಡಿಯಲ್ಲಿದ್ದ ಹಣ ಹಾಗೂ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದರು. ಬಳಿಕ ನೇರಳಕುಪ್ಪೆ ಗ್ರಾಮದ ಮಹಾಲಕ್ಷ್ಮೀ ದೇವಾಲಯದ ಬಾಗಿಲು ಒಡೆದು ಒಳನುಗ್ಗಲು ಯತ್ನಿಸಿದ್ದಾರೆ.
ಈ ವೇಳೆ ಶಬ್ದ ಕೇಳಿದ ಪಕ್ಕದ ಮನೆ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಯುವಕರು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಇಬ್ಬರು ದೇವಾಲಯದ ಪಕ್ಕದ ತೋಟದೊಳಗೆ ಓಡಿ ತಪ್ಪಿಸಿಕೊಂಡರು. ಮತ್ತಿಬ್ಬರು ಕಾರಿನಲ್ಲಿ ಪರಾರಿಯಾಗಲು ಮುಂದಾದರು. ಆಗ ಗ್ರಾಮಸ್ಥರು ತಕ್ಷಣ ಟ್ರಾೃಕ್ಟರ್ ಮೂಲಕ ಕಾರನ್ನು ಅಡ್ಡಗಟ್ಟಿ ಆರೋಪಿಗಳು, ಕಾರು ಹಾಗೂ ಕಳವು ಮಾಡಿದ್ದ ವಸ್ತುಗಳ ಸಮೇತ ಹಿಡಿದರು.
ಘಟನೆ ಕುರಿತು ನೇರಳಕುಪ್ಪೆ ಗ್ರಾಮಸ್ಥರು ಮಧ್ಯರಾತ್ರಿ ಹುಣಸೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರಲ್ಲದೆ, ಕಾರು ಹಾಗೂ ಕದ್ದಿದ್ದ ಪೂಜಾ ಸಾಮಗ್ರಿಗಳನ್ನು ವಶಕ್ಕೆ ಪಡೆದರು.
ಹುಣಸೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಬುಧವಾರ ಹುಣಸೂರು ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಕ್ರೈಂ ವಿಭಾಗದ ಎಸ್‌ಐ ಸ್ವಾಮಿನಾಯಕ, ಸಿಬ್ಬಂದಿ ಪುಟ್ಟನಾಯಕ, ಮಂಜು, ವಿಜಯ್, ರಘು ಅವರು ಆರೋಪಿಗಳಿಬ್ಬರನ್ನು ದೇವಾಲಯಗಳಿಗೆ ಕರೆತಂದು ಮಹಜರು ನಡೆಸಿದರು.