ಬರಪೀಡಿತ  
ಮೈಸೂರು

ಹುಣಸೂರನ್ನು ಬರಪೀಡಿತ ತಾಲೂಕೆಂದು ಘೋಷಿಸಿ

ಹನಗೋಡು: ಹುಣಸೂರು ತಾಲೂಕಿನಲ್ಲಿ ಶೇ.60ರಷ್ಟು ವಾಡಿಕೆ ಮಳೆ ಕಡಿಮೆಯಾಗಿದ್ದು, ಕೃಷಿ ಹಾಗೂ ಕುಡಿಯುವ ನೀರಿಗೆ ಮತ್ತು ಕೆರೆ-ಕಟ್ಟೆಗಳು ತುಂಬದೆ ಜಾನುವಾರುಗಳಿಗೂ ತೊಂದರೆಯಾಗಿದೆ. ಸರ್ಕಾರ ತಕ್ಷಣವೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಒತ್ತಾಯಿಸಿದರು.
ಹನಗೋಡು ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹುಣಸೂರು ತಾಲೂಕಿನಲ್ಲಿ ಬಹುತೇಕ ಬೋರ್‌ವೆಲ್‌ಗಳು, ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿದೆ, ಬೆಳೆಗಳು ಒಣಗುತ್ತಿವೆ. ಬರದ ಛಾಯೆ ಆವರಿಸಿದೆ. ರೈತರು ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ತಕ್ಷಣವೇ ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.
ಪ್ರತಿ ತಾಲೂಕಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ಕೋಟಿ ರೂ.ಅನುದಾನ ಘೋಷಿಸಿದ್ದಾರೆ. ಆದರೆ, ಇನ್ನೂ ಬಿಡುಗಡೆಯಾಗಿಲ್ಲ. ಯಾವುದೇ ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೊಂದು ಯೋಜನೆಗೂ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಘೋಷಿಸಿರುವ ಅನುದಾವನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಲಕ್ಷ್ಮಣತೀರ್ಥ ನದಿ ಸ್ವಚ್ಛತೆಯಾಗದೆ ಪರಿಸರ ಹಾಳಾಗುತ್ತಿದ್ದು, ಸ್ವಚ್ಛತೆಗೆ ಹಾಗೂ ನಗರದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ ಅನುದಾನ ಮಂಜೂರಿಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.
ಮೈಸೂರು ಸಂಸ್ಥಾನದ ಕಲೆ ಹಾಗೂ ಸಂಸ್ಕೃತಿಗೆ ಆದ್ಯತೆ ಕೊಡಿ. ಈ ಬಾರಿ ಮೈಸೂರು ದಸರಾ ನಾಡಹಬ್ಬದಲ್ಲಿ ಕರಾವಳಿ ಭಾಗದ ಕಂಬಳ ಕ್ರೀಡೆ ನಡೆಯುತ್ತಿರುವ ಬಗ್ಗೆ ಮೈಸೂರು ಸಂಸದರಾದ ಯದುವೀರ್ ಒಡೆಯರ್ ಕಂಬಳ ಕ್ರೀಡೆ ಬೇಡ ಎಂದಿದ್ದಾರೆ. ದಸರ ನಾಡಹಬ್ಬವು ಎಲ್ಲ ಜಿಲ್ಲೆಗಳಲ್ಲೂ ಆಚರಣೆ ಮಾಡಬೇಕು. ನಮ್ಮ ಕಲೆ, ಸಂಸ್ಕೃತಿ, ಪದ್ಧತಿಯನ್ನು ಪರಿಗಣಿಸಿ ಕಂಬಳದ ಬಗ್ಗೆಯೂ ಆಲೋಚನೆ ಮಾಡಿ ನಡೆಸಬೇಕು. ಗಜಪಯಣ ನಮ್ಮ ಭಾಗದಲ್ಲೇ ಆರಂಭವಾಗುವುದರಿಂದ ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಲು ಸರ್ಕಾರ ಗಮನ ಹರಿಸಬೇಕೆಂದರು.
ಜೆಡಿಎಸ್ ಮುಖಂಡರಾದ ಸುರೇಂದ್ರ, ಕಿರಂಗೂರು ಬಸವರಾಜ್, ಸುಭಾಷ್, ಅಜ್ಜೇಗೌಡ ಇತರರು ಇದ್ದರು.