ಎಚ್.ವಿಶ್ವನಾಥ 
ಮೈಸೂರು

ಚುನಾವಣೆ ರಾಜಕೀಯಕ್ಕೆ ಎಚ್.ವಿಶ್ವನಾಥ್ ವಿದಾಯ

ಪ್ರಮುಖ ಮುಖ್ಯಾಂಶಗಳು

  • ಹಣ ಖರ್ಚು ಮಾಡಿ ಎಲೆಕ್ಷನ್ ಎದುರಿಸುವ ಶಕ್ತಿ ನನ್ನಲ್ಲಿಲ್ಲ
  • ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು 50 ಕೋಟಿ ರೂ. ಬೇಕು
ಮೈಸೂರು: ಚುನಾವಣೆ ರಾಜಕೀಯಕ್ಕೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿದಾಯ ಹೇಳಿದ್ದಾರೆ. ಮುಂಬರುವ ಯಾವುದೇ ಚುನಾವಣೆಯಲ್ಲೂ ನಾನು ಸ್ಪರ್ಧಿಸುವುದಿಲ್ಲ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಆದರೆ, ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು 50 ಕೋಟಿ ರೂ. ಬೇಕು ಎಂದು ಬೇಸರವ್ಯಕ್ತಪಡಿಸಿದರು.
ರಿಯಲ್ ಎಸ್ಟೇಟ್ ನಡೆಸುವವರು ನಿವೇಶನಗಳನ್ನಾದರೂ ಮಾರಾಟ ಮಾಡಿ ಚುನಾವಣೆ ಎದುರಿಸುತ್ತಾರೆ. ನನಗೆ ಒಂದು ಮನೆ, ಒಂದು ನಿವೇಶನ ಮಾತ್ರ ಇವೆ. 50 ಕೋಟಿ ರೂ. ಖರ್ಚು ಮಾಡಿ ಚುನಾವಣೆ ಎದುರಿಸುವಷ್ಟು ಶಕ್ತಿ ಈಗ ನನ್ನಲ್ಲಿ ಇಲ್ಲ. ನನ್ನ ಮಕ್ಕಳು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರ ಶಕ್ತಾನುಸಾರ ರಾಜಕೀಯದಲ್ಲಿ ಮುಂದುವರಿಯುತ್ತಾರೆ. ನಾನು ಸಹ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ಆದರೆ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.

ರಾಮಚಂದ್ರರಾವ್ ಅಮಾನತು ಆದೇಶ ರದ್ದಿಗೆ ಆಕ್ಷೇಪ

ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅವರ ಅಮಾನತು ಆದೇಶ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಎಚ್.ವಿಶ್ವನಾಥ್ ಆಕ್ಷೇಪಿಸಿದರು.
ಈ ಹಿಂದೆ ಕೇರಳ ಬಸ್‌ನಲ್ಲಿ ಸಿಕ್ಕಿದ್ದ 2 ಕೋಟಿ ಹಣವನ್ನು ಕೊಂಡೊಯ್ದು ಇನ್ಸ್‌ಪೆಕ್ಟರ್ ಮೇಲೆ ಪ್ರಕರಣ ದಾಖಲಿಸಿದ್ದಂತಹ ನಟೋರಿಯಸ್ ರಾಮಚಂದ್ರರಾವ್. ಅವರ ಸಾಕು ಮಗಳು ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಪರಿಣಾಮ ರಾಮಚಂದ್ರರಾವ್ ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಸಹ ಕೇಳಿಬಂದಿತ್ತು. ನ್ಯಾಯ ಕೇಳಲು ಬಂದಿದ್ದ ಮಹಿಳೆಯ ಮೇಲೆ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿವರಣೆ ನೀಡಿದರು.
ಲೈಂಗಿಕ ದೌರ್ಜನ್ಯದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ವಿಡಿಯೋ ನನ್ನದಲ್ಲ ಎಂದು ವಾದಿಸಿದ್ದರು. ಆ ನಂತರ ವಿಧಿವಿಜ್ಞಾನ ಪ್ರಯೋಗಾಲಯದ ನೀಡಿದ ವರದಿಯಲ್ಲಿ ಆ ವಿಡಿಯೋ ರಾಮಚಂದ್ರರಾವ್ ಅವರದ್ದೇ ಎಂಬುದು ಸಾಬೀತಾದ ಕಾರಣ ಅವರನ್ನು ಸರ್ಕಾರವು ಅಮಾನತು ಮಾಡಿತ್ತು. ಇದೀಗ ಏಕಾಏಕಿ ಅವರ ಮೇಲಿನ ಅಮಾನತು ಆದೇಶ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ. ಗೃಹ ಇಲಾಖೆಯನ್ನು ಡಾ.ಜಿ.ಪರಮೇಶ್ವರ್ ನಡೆಸುತ್ತಿದ್ದಾರೋ ಅಥವಾ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನಡೆಸುತ್ತಿದ್ದಾರೆಯೇ ಎಂಬ ಅನುಮಾನವಿದೆ. ಈ ಅಮಾನತು ಆದೇಶ ಹಿಂಪಡೆಯಲು ದೊಡ್ಡ ಮಟ್ಟದ ಕಿಕ್ ಬ್ಯಾಕ್ ಪಡೆದಿರಬಹುದು. ರಾಜ್ಯದಲ್ಲಿ ಯಾವ ಸೀಮೆಯ ಅಧಿಕಾರ ನಡೆಯುತ್ತಿದೆ ಎಂದು ಹರಿಹಾಯ್ದರು.
ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವಕ್ಕೂ ಎಚ್.ವಿಶ್ವನಾಥ್ ಕಿಡಿಕಾರಿದರು. ಪೋಕ್ಸೋ ಕೇಸ್ ಪ್ರಕರಣದ ಆರೋಪಕ್ಕೆ ಯಡಿಯೂರಪ್ಪ ಗುರಿಯಾಗಿದ್ದಾರೆ. ಇದು ಗಂಭೀರ ಪ್ರಕರಣವಾಗಿದೆ. ಆದರೂ ಇದೀಗ ಅವರ ಅಭಿಮಾನೋತ್ಸವಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಎರಡು ಪ್ರಕರಣಗಳು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ. ವಕೀಲರಾಗಿದ್ದ ಸಿಎಂ ಸಿದ್ದರಾಮಯ್ಯರಿಗೆ ಇದೆಲ್ಲ ಗೊತ್ತಿಲ್ಲವೇ ಎಂದು ಗುಡುಗಿದರು.