ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್
ಮೈಸೂರು: ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಈ ಕುರಿತು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಫೆ.21 ರಂದು ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಸಾಲದ ಹಣ ವಾಪಾಸ್ ಪಡೆಯಲು ವಿಶ್ವನಾಥ್ ಬಳಿ ಹೋದ ಸಂದರ್ಭ ಹಲ್ಲೆ ನಡೆದಿದೆ ಎನ್ನಲಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏನಿದು ಪ್ರಕರಣ?: ಅಡಗೂರು ಎಚ್. ವಿಶ್ವನಾಥ್ 2013ರಲ್ಲಿ ಸಂಸದರಾಗಿದ್ದ ಸಂದರ್ಭ ಮಾಜಿ ಸಚಿವ ಎಂಟಿಬಿ ನಾಗರಾಜ್ ಮೂಲಕ ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿಗೆ ಕೋಟೆಹುಂಡಿ ಮಹದೇವು 55 ಲಕ್ಷ ರೂ. ಸಾಲ ಕೊಡಿಸಿದ್ದರು. ಆದರೆ, ವಿಶ್ವನಾಥ್ ಹಣ ಹಿಂತಿರುಗಿಸದೆ ಸತಾಯಿಸಿದ್ದಾರೆ ಎನ್ನಲಾಗಿದೆ.
ಹಣ ಹಿಂತಿರುಗಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಕೋಟೆಹುಂಡಿ ಮಹದೇವು ಫೆ.21 ರಂದು ವಿಶ್ವನಾಥ್ ಅವರನ್ನು ಭೇಟಿಯಾಗಲು ಮುಂದಾಗಿದ್ದರು. ಆ ಸಂದರ್ಭ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಕೋಟೆಹುಂಡಿ ಮಹದೇವು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟೆಹುಂಡಿ ಮಹದೇವು ನೀಡಿದ ದೂರಿನ ಮೇರೆಗೆ ದೇವರಾಜ ಠಾಣೆ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದರು. ನಂತರ ಎಫ್‌ಐಆರ್ ದಾಖಲಿಸುವಂತೆ ಮಹದೇವು ನಗರದ 4ನೇ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋದರು. ಮೇ 17 ರಂದು ನ್ಯಾಯಾಲಯದ ನಿರ್ದೇಶನದ ಮೇರೆಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.