ನಂಜನಗೂಡಿನ ಶಂಕರ ಮಠದಲ್ಲಿ ಗೀತೋಪದೇಶಿ ಗೃಹ ಬಳಗದಿಂದ ಆಯೋಜಿಸಿದ್ದ ಭಗವದ್ಗೀತಾ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಶ್ರೀ ಸುವಿಚಾರ ಗುರೂಜಿ ಭಗವಾನ್ ಶ್ರೀಕೃಷ್ಣನ ವಿರಾಟ್ ವಿಶ್ವರೂಪ ದರ್ಶನದ ಭಾವಚಿತ್ರ ಅನಾವರಣಗೊಳಿಸಿದರು. ಮುಖಂಡರಾದ ತಗಡೂರು ಗೋಪಿನಾಥ್, ಇಂದಿರೇಶ, ಶೋಭಾ ನಾಗಶಯನ ಇತರರು ಹಾಜರಿದ್ದರು.
ನಂಜನಗೂಡು : ಭಗವಾನ್ ಶ್ರೀಕೃಷ್ಣನು ಧ್ಯಾನ, ಜ್ಞಾನದ ಮೂಲಕ ಅರ್ಜುನನಿಗೆ ವಿಶ್ವರೂಪ ದರ್ಶನ ನೀಡಿ ಲೋಕೋಪಕಾರ ಮಾಡಿದ ಎಂದು ಶ್ರೀ ಗೀತಾಚಾರ್ಯ ಸುವಿಚಾರ ಗುರೂಜಿ ತಿಳಿಸಿದರು.
ಅವರು ನಗರದ ಶಂಕರ ಮಠದಲ್ಲಿ ಗೀತೋಪದೇಶಿ ಗೃಹ ಬಳಗದಿಂದ ಭಾನುವಾರ ಸಂಜೆ ಆಯೋಜಿಸಿದ್ದ ಭಗವದ್ಗೀತಾ ವ್ಯಾಖ್ಯಾನ ಕಾರ್ಯಕ್ರಮವನ್ನು ಶಂಖನಾದ ಮೊಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶ್ರೀಕೃಷ್ಣನು ಅರ್ಜುನನಿಗೆ ದೈವಿಕ ದೃಷ್ಟಿಯನ್ನು ಕರುಣಿಸಿದ. ತಾನೇ ಕಾಲ ಸ್ವರೂಪ ಎಂದು ನಿರೂಪಿಸಿದ. ಲೋಕದಲ್ಲಿ ರಾಕ್ಷಸರ ಸಂಹಾರಕ್ಕಾಗಿ ನಾನು ಬಂದಿದ್ದೇನೆ, ನೀನು ಕೇವಲ ನಿಮಿತ್ತ ಮಾತ್ರ ಎಂಬ ಅರಿವು ಮೂಡಿಸಿದ ಎಂದು ಅವರು ವಿವರಿಸಿದರು.
ಕರ್ಮದ ಫಲದ ಮೇಲೆ ಆಸಕ್ತಿ ಇರಬಾರದು. ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಪರಮಾತ್ಮನಲ್ಲಿ ಭಕ್ತಿ ಮತ್ತು ಶರಣಾಗತಿಯಿಂದ ಶಾಶ್ವತ ಶಾಂತಿ ದೊರೆಯುತ್ತದೆ. ಇದೇ ಮೋಕ್ಷದ ಮಾರ್ಗವಾಗಿದೆ ಎಂಬ ಸತ್ಯವನ್ನು ಅರ್ಜುನನಿಗೆ ಅನುಭವದ ಮೂಲಕ ಪರಮಾತ್ಮನು ತಿಳಿಸಿದ. ಇದೇ ವಿಶ್ವರೂಪ ದರ್ಶನದ ಸಾರ ಎಂದು ಗುರೂಜಿ ವಿವರಿಸಿದರು.
ಗೀತೋಪದೇಶಿ ಗೃಹ ಬಳಗದ ಮುಖಂಡರಾದ ತಗಡೂರು ಗೋಪಿನಾಥ್, ಇಂದಿರೇಶ, ಶೋಭಾ ನಾಗಶಯನ, ನಾಗಶರ್ಮಾ, ಸವಿತಾನಾಗೇಂದ್ರ, ಧನ್ಯಶ್ರೀ, ಅನನ್ಯ ಸೇರಿದಂತೆ ಆಧ್ಯಾತ್ಮಿಕ ಬಂಧುಗಳು ಭಾಗವಹಿಸಿದ್ದರು.