ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನೆರವೇರಿತು. ಗುರುಸ್ವಾಮಿ, ಸಿ.ಕೃಷ್ಣ ಇದ್ದರು. 
ಮೈಸೂರು

ಗ್ಯಾರಂಟಿ ಯೋಜನೆಗಳು ಸ್ಥಗಿತ ಇಲ್ಲ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಫಲಾನುಭವಿಗಳಿಗೆ ಬೇಡ ಆತಂಕ
  • ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಸ್ವಾಮಿ ಮಾಹಿತಿ
ಬಡವರಿಗೆ ಅನುಕೂಲವಾಗಲೆಂದು ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡಿದ್ದು, ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಆದ್ದರಿಂದ ಫಲಾನುಭವಿಗಳು ಆತಂಕಕ್ಕೆ ಒಳಗಾಗಬಾರದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಸ್ವಾಮಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಹಣವು ಮೃತಪಟ್ಟವರ ಖಾತೆಗೆ ಸಂದಾಯವಾಗುತ್ತಿದ್ದರೆ, ಅಂತಹ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅದೇ ಕುಟುಂಬದ ಅರ್ಹ ಯಜಮಾನಿಯನ್ನು ನೋಂದಣಿ ಮಾಡಿಸಬೇಕು. ಅಲ್ಲದೆ, ತಾಂತ್ರಿಕ ಸಮಸ್ಯೆಯಿಂದ ಹೆಸರು ಕೈಬಿಟ್ಟಿದ್ದಲ್ಲಿ ಅವರನ್ನು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದರೆ ಗ್ಯಾರಂಟಿ ಯೋಜನೆಯ ದುರುಪಯೋಗ ತಡೆಗಟ್ಟಬಹುದು. ಆದ್ದರಿಂದ ಗ್ರಾಮ ಪಂಚಾಯಿತಿಯೂ ಸೇರಿದಂತೆ ಇಲಾಖೆಗಳು ಒಟ್ಟಾಗಿ ಪರಿಶೀಲನೆ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ತಾಲೂಕು ವ್ಯಾಪ್ತಿಯ ಗೃಹಲಕ್ಷ್ಮಿ ಫಲಾನುಭವಿಗಳು ನಗರ ಪ್ರದೇಶದಲ್ಲಿ 2825, ಗ್ರಾಮಾಂತರದಲ್ಲಿ 1527 ಸೇರಿದಂತೆ ಒಟ್ಟು 4352 ಮರಣ ಹೊಂದಿದ್ದಾರೆ. ಅದರಲ್ಲಿ ಇಲ್ಲಿಯವರೆಗೆ 1756 ಫಲಾನುಭವಿಗಳನ್ನು ಅದೇ ಮನೆಯಲ್ಲಿ ಗುರುತಿಸಿ ನೋಂದಣಿ ಮಾಡಿಸಿ ಅವರ ಖಾತೆಗೆ ಹಣ ಜಮೆಯಾಗುತ್ತಿದೆ ಎಂದು ಮಾಹಿತಿ ಇದೆ. ಈ ಪ್ರಗತಿಯ ವೇಗ ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಮಾತನಾಡಿ, ಗ್ಯಾರಂಟಿ ಯೋಜನೆಯನ್ನು ನಮ್ಮ ತಾಲೂಕಿನಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಬೇಕು. ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿಗಳನ್ನು ಪರಿಶೀಲನೆ ನಡೆಸಬೇಕು. ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸುವ ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿ ಮುತವರ್ಜಿಯಿಂದ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.
ಯುವನಿಧಿ ಯೋಜನೆ ಕುರಿತು ಜಾಗೃತಿ ಮೂಡಿಸಬೇಕು. ಫಲಾನುಭವಿಗಳೊಡನೆ ಸೌಜನ್ಯದಿಂದ ವರ್ತಿಸಿ, ಯೋಜನೆ ಸಂಬಂಧ ಯಾವುದೇ ಗೊಂದಲವಿದ್ದರೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಬಿ.ರವಿ, ರಾಣಿ, ಎಂ.ಸೋಮಣ್ಣ, ಕರೀಗೌಡ, ಮಹದೇವು, ಶಂಕರ್, ತಾಪಂ ಯೋಜನಾಧಿಕಾರಿ ಸುರೇಶ್, ವಿಷಯ ನಿರ್ವಾಹಕ ಬಿ.ಆರ್.ಸೋಮಶೇಖರ್ ಇತರರಿದ್ದರು.