ಪಾಲಿಕೆಯ ವಲಯ ಕಚೇರಿ-9ರ ಕಟ್ಟಡದಲ್ಲಿ ಎನ್.ಆರ್.ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಂ.ಎನ್.ಮಹದೇವ ಅವರನ್ನು ಶಾಸಕ ತನ್ವೀರ್ ಸೇಠ್ ಅಭಿನಂದಿಸಿದರು. ಅಯೂಬ್‌ಖಾನ್, ಪುಷ್ಪಲತಾ ಜಗನ್ನಾಥ್, ಪುಷ್ಪಲತಾ, ಚಿಕ್ಕಣ್ಣ, ಪುಷ್ಪವಲ್ಲಿ, ಆರೀಫ್ ಹುಸೇನ್ ಇನ್ನಿತರರಿದ್ದರು.
- ಶಾಸಕ ತನ್ವೀರ್ ಸೇಠ್ ಹೇಳಿಕೆ
- ನರಸಿಂಹರಾಜ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ
ಮೈಸೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಹಳಷ್ಟು ಜನರಿಗೆ ಅನುಕೂಲವಾಗಿದ್ದು, ಬಡವರಿಗೆ ಆರ್ಥಿಕ ಚೈತನ್ಯಕೊಟ್ಟಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-9ರ ಕಟ್ಟಡದಲ್ಲಿ ನರಸಿಂಹರಾಜ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆಯುವ ಮೂಲಕ ಜನರ ನೆರವು ಕಲ್ಪಿಸಿಕೊಟ್ಟಿದೆ ಎಂದರು.
ಎನ್‌ಆರ್ ಕ್ಷೇತ್ರದ ವ್ಯಾಪ್ತಿ 52 ಸಾವಿರ ಗೃಹಲಕ್ಷಿ, 1.18 ಲಕ್ಷ ಗೃಹ ಜ್ಯೋತಿ, 1.21ಲಕ್ಷ ಜನ ಅನ್ನಭಾಗ್ಯ ಯೋಜನೆ ಲಾಭ ಪಡೆಯುತ್ತಿದ್ದಾರೆ. ಯಾವುದಾರೂ ತಕರಾರು ಬಂದ ಸಂದರ್ಭದಲ್ಲಿ ಈ ಸಮಿತಿ ಅದನ್ನು ಬಗೆಹರಿಸುವ ಕೆಲಸ ಮಾಡುತ್ತದೆ. ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪಂಚ ಗ್ಯಾರಂಟಿಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದು, ನಗರ ಪ್ರದೇಶದಲ್ಲಿ ಪಂಚ ಗ್ಯಾರಂಟಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇದೀಗ ಮೈಸೂರು ಪಾಲಿಕೆ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರದಲ್ಲೂ ಗ್ಯಾರಂಟಿಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲೂ ಸಮಿತಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಪಕ್ಷದಲ್ಲಿ ಸಂಘಟನೆಗೆ ಆದ್ಯತೆ ನೀಡಿ, ಜನರ ನಾಡಿಮಿಡಿತ ಅರಿತಿರುವ ಪಕ್ಷದ ಹಿರಿಯ ಮುಖಂಡ ಎಂ.ಎನ್.ಮಹದೇವ ಅವರನ್ನು ನರಸಿಂಹರಾಜ ಕ್ಷೇತ್ರದ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿದೆ. ಸದಸ್ಯರಾದ ಎಚ್.ಶಶಿಕುಮಾರ್, ಎನ್.ಸುರೇಂದ್ರ, ರಾಕೇಶ್ ಕುಮಾರ್, ಅಹ್ಮದ್ ಸಲೀಂ, ಸಿ.ವಿಜಯಲಕ್ಷ್ಮೀ, ಎನ್.ರೇಷ್ಮ, ಜಿ.ಪದ್ಮಾವತಿ, ಸೈಯದ್ ಸದ್ದಾಂ, ಎನ್.ಲೋಕೇಶ್ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಮಾಜಿ ಮೇಯರ್‌ಗಳಾದ ಪುಷ್ಪಲತಾ ಜಗನ್ನಾಥ್, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಮಾಜಿ ಉಪಮೇಯರ್ ಪುಷ್ಪವಲ್ಲಿ, ಪಾಲಿಕೆ ಮಾಜಿ ಸದಸ್ಯ ಆರೀಫ್ ಹುಸೇನ್, ಆರ್.ಗಿರಿ, ಮಜೀದ್ ಅಹ್ಮದ್, ಅದ್ನಾನ್, ಸೈಯದ್ ಫಾರೂಕ್, ಅಬ್ದುಲು ವಸೀಂ, ಶೌಕತ್ ಅಲೀ ಖಾನ್, ಶ್ರೀನಿವಾಸ್ ಇನ್ನಿತರರಿದ್ದರು.