ಸರಗೂರು ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ವಿವೇಕಾ ಬೃಹತ್ ಕೃಷಿ ಮೇಳದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಾವ್ಯರಾಣಿ, ಡಾ.ಜಯಮಾಲಾ, .ಚೈತ್ರಾಸ್ವಾಮಿ, ಸವಿತಾ ಇತ್ತರರು ಇದ್ದರು. 
ಮೈಸೂರು

ಸಿಕ್ಕ ಸ್ವಾತಂತ್ರದಲ್ಲಿ ಬೆಳವಣಿಗೆ ಹೊಂದಿ

ಸರಗೂರು. ಮಹಿಳೆಯರು ತಮಗೆ ಸಿಕ್ಕಿರುವ ಸ್ವಾತಂತ್ರದಲ್ಲಿ ಬೆಳವಣಿಗೆ ಆಗಬೇಕು ಎಂದು ಹುಣಸೂರು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ತಿಳಿಸಿದರು.
ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತು ಸರ್ಕಾರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ವಿವೇಕಾ’ ಬೃಹತ್ ಕೃಷಿ ಮೇಳದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಮನೆಯ ನಿರ್ವಣೆಯ ಜತೆಗೆ ಹೊರಗಡೆ ಕೂಡ ತಮ್ಮ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ. ಮಹಿಳೆಯರಿಗೆ ಸಿಕ್ಕಿರುವ ಸ್ವಾತಂತ್ರದಲ್ಲಿ ತಮ್ಮ ವೈಯಕ್ತಿಕ ಬೆಳವಣಿಗೆಗಳು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ನೀಡುವ ತರಬೇತಿಗಳನ್ನು ಮಹಿಳೆಯರು ಉಪಯೋಗಿಸಿಕೊಂಡು ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.
ಸರಗೂರಿನ ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಜಯಮಾಲಾ ಮಾತನಾಡಿ 1918ಕ್ಕಿಂತ ಮುಂಚೆ ಮಹಿಳೆಯರಿಗೆ ಸಾಕಷ್ಟು ದೌರ್ಜನ್ಯ ಅತ್ಯಾಚಾರ ಮತ್ತು ಅಹಿತಕರ ಘಟನೆಗಳು ನಡೆಯುತ್ತಿದ್ದವು. ಈ ರೀತಿಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಮಹಿಳಾ ದಿನಾಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಮಹಿಳೆಯರು ಕಾಣದ ಕೈಗಳಾಗಿ ದುಡಿಯುತ್ತಿದ್ದಾರೆ. ಪ್ರತಿಯೊಂದು ಸನ್ನಿವೇಶದಲ್ಲೂ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಚಮನ್ ಲಾಲ್ ಮಾತನಾಡಿ, ರೈತಶಕ್ತಿ, ಮಹಿಳಾ ಶಕ್ತಿ ಒಟ್ಟುಗೊಡಿದರೆ ರೈತರ ಸಬಲೀಕರಣದ ಜತೆ ಮಹಿಳಾ ಸಬಲೀಕರಣ ಕೂಡ ಆಗುತ್ತದೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪೈಪೋಟಿಯಲ್ಲಿ ಕೆಲಸ ಮಾಡುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆ ಕಾರ್ಯನಿರ್ವಾಣಾಧಿಕಾರಿಗಳಾದ ಸವಿತಾ ಮಾತನಾಡಿ, ಎಲ್ಲ ಮಹಿಳೆಯರು ಸಾಧಕಿಯರೇ. ಪ್ರಸ್ತುತ ಶಿಕ್ಷಣ ನಮಗೆ ಪ್ರಪಂಚದ ಅರಿವನ್ನು ನೀಡುತ್ತದೆ. ಆದರೆ ಮಹಿಳೆಯರಿಗೆ ವಿವೇಕದ ಕಲ್ಪನೆ ಬಹಳ ಮುಖ್ಯ. ಮಹಿಳೆಗೆ ಎಲ್ಲರನ್ನು ಕ್ಷಮಿಸುವ ಗುಣವಿದೆ. ಎಲ್ಲರನ್ನು ಸಮಾನತೆಯಿಂದ ನೋಡುವ ಪ್ರವೀಣತೆ ಮಹಿಳೆಯರಲ್ಲಿ ಕಾಣಬಹುದು ಎಂದರು.
ಸಾಧಕಿ ರಾಗಿಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಪ್ರಕೃತಿ ಗಿರಿಜನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಟ್ಟಮ್ಮ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ನಿರ್ದೇಶಕರಾದ ಡಾ.ಡೆನ್ನಿಸ್, ಹಿರಿಯ ವ್ಯವಸ್ಥಾಪಕರಾದ ಪಿ.ಡಿ.ನಾಯಕ, ರವಿಕುಮಾರ, ಚಿನ್ನಮಹದೇವ, ಶಂಕರ ರಶೀದ್, ನಾಗೇಶ್ ಅಕ್ಷಯಾ ಹಾಗೂ ಸಿಬ್ಬಂದಿ ಇದ್ದರು.