ತಿ.ನರಸೀಪುರ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸೋಸಲೆ ಹೋಬಳಿ ಹಾಗೂ ಬನ್ನೂರು ಭಾಗದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಬಿ.ಬಸವರಾಜು ಮಾತನಾಡಿದರು. ಸೋಸಲೆ ಮಹದೇವಸ್ವಾಮಿ, ಎಂ.ಪರಶಿವಮೂರ್ತಿ, ಉಕ್ಕಲಗೆರೆ ಬಸವಣ್ಣ, ಎಂ.ಮಲ್ಲಿಕಾರ್ಜುನಸ್ವಾಮಿ, ರಾಮಲಿಂಗಯ್ಯ, ಚಿಕ್ಕಣ್ಣ, ಕೆ.ಎನ್.ಕುಮಾರ್ ಇತರರು ಇದ್ದರು.
- ಸಚಿವರ ಆಪ್ತ ಸಹಾಯಕ ಬಿ.ಬಸವರಾಜು ಮಾಹಿತಿ ಮಾಹಿತಿ
- ಸೋಸಲೆ ಹೋಬಳಿ, ಬನ್ನೂರು ಭಾಗದ ಮುಖಂಡರ ಸಭೆ
ತಿ.ನರಸೀಪುರ: ತುರಗನೂರು ವಿಸ್ತರಣಾ ನಾಲೆ ಸೇರಿದಂತೆ ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಆಧುನೀಕರಣಕ್ಕೆ ರಾಜ್ಯ ಸರ್ಕಾರ 92 ಕೋಟಿ ರೂ.ಅನುದಾನವನ್ನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಫೆ.20ರಂದು ತಾಲೂಕಿನ ಚಿದರವಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ಸಲ್ಲಿಸಿ, ಕಾಮಗಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಸಚಿವರ ಆಪ್ತ ಸಹಾಯಕ ಬಿ.ಬಸವರಾಜು ಮಾಹಿತಿ ನೀಡಿದರು.
ನಾಲೆಗಳ ಆಧುನೀಕರಣಕ್ಕೆ ಮುಹೂರ್ತ ನಿಗದಿಯಾದ ಹಿನ್ನೆಲೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸೋಸಲೆ ಹೋಬಳಿ ಹಾಗೂ ಬನ್ನೂರು ಭಾಗದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮೊದಲ ಹಂತದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ತುರಗನೂರು ಶಾಖಾ(ಬ್ರಾಂಚ್) ನಾಲೆ ಆಧುನೀಕರಣಗೊಂಡಿದೆ. ಎರಡನೇ ಹಂತದಲ್ಲಿ ನಾಲೆಯ ಸಂಪರ್ಕದಲ್ಲಿರುವ ತುರಗನೂರು ವಿಸ್ತರಣಾ ನಾಲೆ ಸೇರಿದಂತೆ ಉಕ್ಕಲಗೆರೆ ಮತ್ತು ಹಲವಾರ ಶಾಖಾ ನಾಲೆಗಳ ಕಾಯಕಲ್ಪಕ್ಕೆ ಯೋಜನೆ ರೂಪಿಸಿ ಅನುದಾನವನ್ನು ನೀಡಿರುವುದರಿಂದ ಸಂಸದ ಸುನೀಲ್ ಬೋಸ್, ನೀರಾವರಿ ಸಚಿವರ ಜತೆಗೂಡಿ ಸಚಿವ ಮಹದೇವಪ್ಪ ಅವರು ಶಿಲಾನ್ಯಾಸ ನೆರವೇರಿಸುವರು ಎಂದು ಹೇಳಿದರು.
ಹಿರಿಯ ಮುಖಂಡ ಸೋಸಲೆ ಮಹದೇವಸ್ವಾಮಿ ಮಾತನಾಡಿ, 92 ಕೋಟಿ ರೂ. ವೆಚ್ಚದಲ್ಲಿ 67 ಕಿ.ಮೀ.ಉದ್ದದ ನಾಲೆ, ಉಪ ನಾಲೆಗಳು, ಪಿಕಪ್ ನಾಲೆ ಹಾಗೂ ಕೆರೆ ಸಂಪರ್ಕ ನಾಲೆಗಳು ಆಧುನೀಕರಣವಾಗಲಿವೆ. ಇದರಿಂದ ಸೋಸಲೆ ಹೋಬಳಿಯ ಬರಡು ಭೂಮಿ ಅಚ್ಚ ಹಸಿರಿನಿಂದ ಕಂಗೊಳಿಸಲಿದೆ. ಜತೆಗೆ ಮಳವಳ್ಳಿ ತಾಲೂಕಿನ ಬಿ.ಜಿ.ಪುರ ನಾಲೆಯೂ ಆಧುನೀಕರಣಕ್ಕೆ ಸೇರ್ಪಡೆಯಾಗಲಿದೆ. ಆದ್ದರಿಂದ ಚಿದರವಳ್ಳಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ ಮಾತನಾಡಿ, ತುರಗನೂರು ವಿಸ್ತರಣಾ ನಾಲೆ ಸೇರಿದಂತೆ ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಆಧುನೀಕರಣ ಕಾಮಗಾರಿಯಿಂದ ನೂರಾರು ಮಳೆಯಾಶ್ರಿತ ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಇಂತಹ ಮಹತ್ವದ ಕಾರ್ಯಕ್ಕೆ ಅಚ್ಚುಕಟ್ಟು ಪ್ರದೇಶದ ಪ್ರತಿಯೊಂದು ಗ್ರಾಮದ ರೈತರನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.
ತಾ.ಪಂ.ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯ ರಾಮಲಿಂಗಯ್ಯ, ಸೋಸಲೆ ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಎಂ.ಪರಶಿವಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬೂದಹಳ್ಳಿ ಸಿದ್ದರಾಜು, ಚಿದರವಳ್ಳಿ ಎಂ.ಮಹೇಶ ಮಾತನಾಡಿದರು.
ಸುನೀಲ್ ಬೋಸ್ ಯುವ ಬ್ರಿಗೇಡ್ ಸಂಚಾಲಕ ಕುಮಾರ್ ರಾಮೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಮಹದೇವ, ಎಂ. ಚಂದ್ರಶೇಖರ, ಚಿಕ್ಕಣ್ಣ, ಎ.ಎನ್.ಮಹೇಶ್, ಡಿ.ಮಂಟೇಸ್ವಾಮಿ, ಸುನೀಲ್ ಕುಮಾರ್, ಮಹದೇವಸ್ವಾಮಿ, ಕೊಳತ್ತೂರು ಡೇರಿ ಅಧ್ಯಕ್ಷ ಕೆ.ಎನ್.ಕುಮಾರ್, ನೆರಗ್ಯಾತನಹಳ್ಳಿ ಪಿಎಸಿಸಿಎಸ್ ನಿರ್ದೇಶಕಿ ಶಿವಮ್ಮ, ಯೂತ್ ಕಾಂಗ್ರೆಸ್ ಅಧ್ಯಕ್ಷ ನವಾಜ್ ಖಾನ್, ಮುಖಂಡರಾದ ರಾಮೇಗೌಡನಪುರ ನಿಂಗರಾಜು, ಕೆಂಪರಾಜು, ನಾಗಲಗೆರೆ ಶಾಂತರಾಜು, ಕೆಂಪನಪುರ ಗಂಗೇಶ್, ಲಿಂಗರಾಜು, ಸಿದ್ದು, ಎಂ. ನಿಂಗರಾಜು, ಎನ್.ನಿಂಗಯ್ಯ, ಕಳ್ಳಿಪುರ ನಾಗಣ್ಣ, ಮಲಿಯೂರು ದೊಳ್ಳಯ್ಯ ಇತರರು ಇದ್ದರು.