ಮೈಸೂರಿನ ವಿಹಂಗಮ ನೋಟ 
ಮೈಸೂರು

ಗ್ರೇಟರ್ ಮೈಸೂರು ರಚನೆ ಹಿನ್ನೆಲೆ : ನಿವೇಶನಗಳಿಗೆ ಹೆಚ್ಚಲಿದೆ ಬೇಡಿಕೆ?

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ನಿವೇಶನಗಳ ಬೆಲೆ ಏರಿಕೆಯಾಗುವ ಸಾಧ್ಯತೆ
  • ಹೂಡಿಕೆಗೆ ಸೂಕ್ತ ಸಮಯ
ಸದೇಶ್ ಕಾರ್ಮಾಡ್ ಮೈಸೂರು
ನಗರದ ಹೊರವಲಯದ ಹಲವು ಪ್ರದೇಶಗಳನ್ನು ಸೇರಿಸಿ ಗ್ರೇಡ್ 1 ಮೈಸೂರು ಮಹಾನಗರ ಪಾಲಿಕೆ (ಗ್ರೇಟರ್ ಮೈಸೂರು) ರಚಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದು, ಇದರಿಂದ ನಗರದ ಹೊರವಲಯದಲ್ಲಿರುವ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗ ಲಿದ್ದು, ನಿವೇಶನಗಳ ದರವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.
ನಗರ ಪಾಲಿಕೆ ಸುತ್ತಮುತ್ತ ಇರುವ 5 ನಗರ ಸ್ಥಳೀಯ ಸಂಸ್ಥೆಗಳು, 7 ಗ್ರಾಮ ಪಂಚಾಯಿಗಳ 20 ಗ್ರಾಮಗಳನ್ನು ಒಟ್ಟು ಸೇರಿಸಿ ಗ್ರೇಡ್ 1 ನಗರ ಪಾಲಿಕೆ ರಚಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಹಲವಾರು ಬಡಾವಣೆಗಳು ನಿರ್ಮಾಣಗೊಂಡು ನಿವೇಶನಗಳು ಹಂಚಿಕೆಯಾಗಿದ್ದು, ಇನ್ನೂ ಹಲವಾರು ಬಡಾವಣೆಗಳು ನಿರ್ಮಾಣ ಆಗುತ್ತಿವೆ. ಈ ಎಲ್ಲ ಪ್ರದೇಶಗಳು ಇನ್ನು ಮುಂದೆ ಮೈಸೂರು ನಗರ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಸಹಜವಾಗಿಯೇ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದೇ ನೆಪದಲ್ಲಿ ನಿವೇಶನಗಳ ಬೆಲೆ ಏರಿಕೆಯಾಗಲಿದೆ.
ಮೈಸೂರನ್ನು ನಿವೃತ್ತರ ಸ್ವರ್ಗ ಎಂದು ಕರೆಯಲಾಗುತ್ತದೆ. ಮೈಸೂರು ಯೋಜನಾಬದ್ಧವಾಗಿ ನಿರ್ಮಾಣಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ. ಇಲ್ಲಿ ವಿಶಾಲವಾದ ರಸ್ತೆಗಳು, ಉದ್ಯಾನಗಳು ಹಾಗೂ ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ ಜನರು ಸಹಜವಾಗಿಯೇ ಇಲ್ಲಿ ನೆಲೆಸಲು ಬಯಸುತ್ತಾರೆ. ಹೀಗಾಗಿ ಮೈಸೂರಿನಲ್ಲಿ ಒಂದು ನಿವೇಶನ ಖರೀದಿಸಬೇಕು ಎಂಬುದು ಎಲ್ಲರ ಕನಸು ಆಗಿದೆ. ಇನ್ನು ಕೆಲವರು ನಗರ ಮುಂದಿನ ದಿನಗಳಲ್ಲಿ ಸಾಕಷ್ಟು ಬೆಳವಣಿಗೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿ ನಿವೇಶನಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಹಲವಾರು ಹೊಸ ಬಡಾವಣೆಗಳು ನಿರ್ಮಾಣಗೊಳ್ಳುತ್ತಿದೆ. ಇದೀಗ ನಗರದ ಹೊರ ವಲಯದ ಪ್ರದೇಶಗಳು ಮೈಸೂರು ನಗರ ವ್ಯಾಪ್ತಿಗೆ ಸೇರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿವೇಶನಗಳ ಮೇಲೆ ಹೂಡಿಕೆ ಮಾಡಲು ಒಲವು ತೋರಲಿದ್ದಾರೆ.

ಯಾವೆಲ್ಲ ಪ್ರದೇಶ ಸೇರ್ಪಡೆ?

ಗ್ರೇಟರ್ ಮೈಸೂರು ವ್ಯಾಪ್ತಿಗೆ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ ಪಟ್ಟಣ ಪಂಚಾಯಿತಿಗಳು, ಇಲವಾಲ, ಸಿದ್ದಲಿಂಗಪುರ, ಚಾಮುಂಡಿಬೆಟ್ಟ, ನಾಗನಹಳ್ಳಿ, ನಾಗವಾಲ, ಧನಗಳ್ಳಿ, ಬೀರಿಹುಂಡಿ ಹಾಗೂ ಆಲನಹಳ್ಳಿ ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಲಿದೆ. ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉತ್ತನಹಳ್ಳಿ, ಬಂಡಿಪಾಳ್ಯ, ಹೊಸಹುಂಡಿ, ಮರ್ಸಿ, ಮದರಗಳ್ಳಿ, ಏಳಿಗೆಹುಂಡಿ, ಗುಡುಮಾದನಹಳ್ಳಿ, ಗೆಜ್ಜಗಳ್ಳಿ, ಮಂಡಕಳ್ಳಿ ಪ್ರದೇಶ ಹಾಗೂ ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾದನಹಳ್ಳಿ ಗ್ರಾಮ ಮಾತ್ರ ಗ್ರೇಟರ್ ಮೈಸೂರು ವ್ಯಾಪ್ತಿಗೆ ಸೇರ್ಪಡೆಯಾಗಲಿದೆ.

ವಾರ್ಡ್‌ಗಳ ಸಂಖ್ಯೆ ಹೆಚ್ಚಳ

ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 65 ವಾರ್ಡ್‌ಗಳು ಇವೆ. ಒಂದುವೇಳೆ ಗ್ರೇಟರ್ ಮೈಸೂರು ರಚನೆಯಾದರೆ ವಾರ್ಡ್‌ಗಳ ಸಂಖ್ಯೆ ಜನಸಂಖ್ಯೆಗೆ ಅನುಗುಣವಾಗಿ 100ಕ್ಕೂ ಹೆಚ್ಚು ವಾರ್ಡ್‌ಗಳು ರಚನೆಯಾಗುವ ಸಾಧ್ಯತೆ ಇದೆ. 2011ರ ಜನಗಣತಿ ಪ್ರಕಾರ ಮೈಸೂರು ನಗರದಲ್ಲಿ 9,20,550 ಜನಸಂಖ್ಯೆ ಇದ್ದು, ಪ್ರಸ್ತುತ 11,46,069 ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾ ಗಿದೆ. ಪ್ರಸ್ತುತ ಗ್ರೇಟರ್ ಮೈಸೂರು ವ್ಯಾಪ್ತಿಯ ಪ್ರದೇಶದಲ್ಲಿ 14,16,671 ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರ 2025ರ ಜನಗಣತಿ ನಡೆಸಿದ ನಂತರ ಗ್ರೇಟರ್ ಮೈಸೂರು ಪ್ರದೇಶದಲ್ಲಿ ಎಷ್ಟು ಜನರು ವಾಸವಿದ್ದಾರೆ ಎಂಬ ನಿಖರ ಅಂಕಿ ಅಂಶ ದೊರೆಯಲಿದೆ.
ಪಾಲಿಕೆ ಆದಾಯ ವೃದ್ಧಿ
ಗ್ರೇಟರ್ ಮೈಸೂರು ರಚನೆಯ ನಂತರ ಪಾಲಿಕೆಗೆ ಹೆಚ್ಚುವರಿಯಾಗಿ 25.81 ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆ ಇದೆ. ನಗರದ ಹೊರ ವಲಯದಲ್ಲಿರುವ ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ದರ ಕಡಿಮೆ ಇದ್ದು, ನಗರ ಪಾಲಿಕೆ ವ್ಯಾಪ್ತಿಗೆ ಬಂದರೆ ತೆರಿಗೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಪ್ರಸ್ತುತ ಸಂಗ್ರಹವಾಗುತ್ತಿರುವ ತೆರಿಗೆ ಹಣಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ ನಗರ ಪಾಲಿಕೆಗೆ ದೊರೆಯುವ ನಿರೀಕ್ಷೆ ಇದೆ. ಗ್ರೇಟರ್ ಮೈಸೂರು ರಚನೆಯಾದರೆ ಜನಸಂಖ್ಯೆಗೆ ಪೂರಕವಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ.

ಪೆರಿಫೆರಲ್ ರಿಂಗ್‌ರೋಡ್ ನಿರ್ಮಾಣ

ಮೈಸೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಇದಕೋಸ್ಕರ ಭೂಸ್ವಾಧೀನ ಕೈಗೊಳ್ಳಲು ಸಕಲ ಸಿದ್ಧತೆ ಕೈಗೊಂಡಿದೆ. ಒಟ್ಟು 105 ಕಿ.ಮೀ. ಉದ್ದದ 200 ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಗರದ ಮುಂದಿನ 25 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಂಡು ಈ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ದಶಕದ ಹಿಂದೆ 45 ಕಿ.ಮೀ. ಉದ್ದದ ಔಟರ್ ರಿಂಗ್ ರೋಡ್ ನಿರ್ಮಾಣ ಮಾಡಲಾಗಿತ್ತು. ಔಟರ್ ರಿಂಗ್ ರೋಡ್ ನಿರ್ಮಾಣದ ಬಳಿಕ ನಗರದ ಬೆಳವಣಿಗೆಯ ವೇಗ ಮತ್ತಷ್ಟು ಹೆಚ್ಚಾಯಿತು. ಹೊಸದಾಗಿ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದರೆ ನಗರ ಮತ್ತಷ್ಟು ಬೆಳವಣಿಗೆ ಕಾಣಲಿದೆ. ಗ್ರೇಟರ್ ಮೈಸೂರು ರಚನೆ ಪೆರಿಫೆರಲ್ ರೀಮಗ್‌ರೋಡ್ ನಿರ್ಮಾಣವು ರಿಯಲ್ ಎಸ್ಟೇಟ್ ಉದ್ಯಮದ ಪಾಲಿಗೆ ವರದಾನವಾಗಲಿದೆ.