ಮೈಸೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಯೋಗ ಮಂಗಳವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಮೈಸೂರು: ರಾಜ್ಯ ಸರ್ಕಾರ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಯ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನಗರದ 4 ದಿಕ್ಕುಗಳಲ್ಲಿ ಹೊಸದಾಗಿ ಮಲಿನನೀರು ಶುದ್ಧೀಕರಣ ಘಟಕ ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಬೇಕು, ಉತ್ತಮವಾದ ಸಂಪರ್ಕ ಕಲ್ಪಿಸಲು ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಲ್ಲದೆ, ಹೆಚ್ಚುವರಿಯಾಗಿ ರಸ್ತೆಗಳನ್ನು ನಿರ್ಮಿಸಬೇಕು ಎಂದು ಕಾಂಗ್ರೆಸ್ ನಿಯೋಗ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ.ಆರ್. ರಕ್ಷಿತ್ ಅವರನ್ನು ಭೇಟಿಯಾಗಿ ನಗರದಲ್ಲಿ ಮುಂದಿನ ದಿನಗಳಲ್ಲಿ ಜನರ ಅನುಕೂಲಕೋಸ್ಕರ ಕೈಗೆತ್ತಿಕೊಳ್ಳಬೇಕಾಗಿರುವ ಕಾಮಗಾರಿಗಳ ಕುರಿತು ಸಲಹೆ ನೀಡಿ, ಚರ್ಚೆ ನಡೆಸಿದರು.
ಮೈಸೂರನ್ನು ಹಸಿರು ನಗರವನ್ನಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಗಳನ್ನು ನಿರ್ಮಿಸಿ ಮರಗಳನ್ನು ಬೆಳೆಸಬೇಕು. ಬೃಹತ್ ನಗರ ಪಾಲಿಕೆಯೊಳಗೆ ಸೇರ್ಪಡೆಗೊಂಡಿರುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳನ್ನು ನಿರ್ಮಿಸಲು ಭೂಮಿ ಕಾಯ್ದಿರಿಸಬೇಕು, ಕ್ರೀಡೆಗೆ ಅನುಕೂಲಕರವಾಗಿ ಆಟದ ಮೈದಾನಗಳು ಮತ್ತು ದೊಡ್ಡ ಸ್ಟೇಡಿಯಂಗಳನ್ನು ನಿರ್ಮಿಸಲು ಜಾಗ ಕಾಯ್ದಿರಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೈಸೂರು ಪ್ರವಾಸೋದ್ಯಮ ಕೇಂದ್ರವಾಗಿರುವುದರಿಂದ ಪ್ರವಾಸೋದ್ಯಮಕ್ಕೆ ಅನುಕೂಲಕರವಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಬೇಕು, 341 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕನಿಷ್ಠ 120 ವಾರ್ಡ್‌ಗಳಾಗಿ ಘೋಷಿಸಬೇಕು, ವಾರ್ಡ್‌ಗಳನ್ನು ವಿಸ್ತೀರ್ಣದ ಆಧಾರದ ಮೇರೆಗೆ ಹಂಚಬೇಕು. ಜನಸಂಖ್ಯೆಯ ಆಧಾರದಲ್ಲಿ ವಿಂಗಡಿಸಬಾರದು. ಕನಿಷ್ಠ 20 ನಗರಪಾಲಿಕೆಗಳ ವಲಯ ಕಚೇರಿಗಳನ್ನು ತೆರೆಯಬೇಕು ಎಂದು ಕೋರಿಕೊಂಡರು.
ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶಗಳಿಗೂ ಕುಡಿಯಲು ಕಾವೇರಿ ನೀರಿನ ಸೌಲಭ್ಯ ನೀಡಬೇಕು, ಪ್ರತಿ ವಾರ್ಡ್‌ಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು, ಕನಿಷ್ಠ್ಟ 4 ನೀರು ಸಂಗ್ರಹ ಕೇಂದ್ರಗಳನ್ನು ನಿರ್ಮಿಸಬೇಕು ಮತ್ತು ಈ ಕೇಂದ್ರಗಳಲ್ಲಿ ನೀರು ಶುದ್ದೀಕರಣ ಘಟಕಗಳನ್ನು ನಿರ್ಮಿಸಬೇಕು. ವಿದ್ಯುಚ್ಛಕ್ತಿ ಪ್ರಸಾರ ಕೇಂದ್ರಗಳನ್ನು ಪ್ರತಿ 50 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಬೇಕು. ಕನಿಷ್ಠ 4 ಬಸ್ ಡಿಪೋಗಳನ್ನು ಮತ್ತು 10 ಕಡೆ ಬೃಹತ್ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕು, ಮೂಲ ಸೌಕರ್ಯಗಳಿಗೆ ಹಾಗೂ ರಾಜ್ಯ ಮತ್ತು ಕೇಂದ್ರದ ವ್ಯಾಪ್ತಿಯ ಕಚೇರಿಗಳಿಗೆ, ಪೊಲೀಸ್ ಠಾಣೆಗಳಿಗೆ ಜಾಗ ಕಾಯ್ದಿರಿಸಬೇಕು. ಎಲ್ಲ ಸೌಲಭ್ಯಗಳನ್ನು ಒದಗಿಸಲು ಬಜೆಟ್‌ನಲ್ಲಿ 1 ಸಾವಿರ ಕೋಟಿ ಘೋಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಈ ಸಂದರ್ಭ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಹಾಗೂ ಇತರರು ಇದ್ದರು.