ಬೆಟ್ಟದಪುರ ಸಮೀಪದ ಚಿಕ್ಕಕಮರಹಳ್ಳಿ ಗ್ರಾಮದ ರೈತ ಪ್ರಕಾಶ್ ಜಮೀನಿಗೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ, ಮುಸುಕಿನ ಜೋಳದಲ್ಲಿ ಕಂಡುಬರುತ್ತಿರುವ ರೋಗಗಳ ಬಗ್ಗೆ ಅಧ್ಯಯನ ನಡೆಸಿ, ಚರ್ಚಿಸಿದರು. ಡಾ.ಉಮಾಶಂಕರ್, ಬಿ.ಕೆ ಕುಸುಮಾ, ಹಿತೇಶ್ ಇತರರಿದ್ದರು. 
ಮೈಸೂರು

ಮುಸುಕಿನ ಜೋಳಕ್ಕೆ ಬೂದು ರೋಗದ ಕಾಟ

ಬೆಳೆ ಪರಿವರ್ತನೆ ಮಾಡಿಕೊಳ್ಳಲು ವಿಜ್ಞಾನಿ ಡಾ.ಉಮಾಶಂಕರ್ ಸಲಹೆ

ಬೆಟ್ಟದಪುರ: ಹಲವು ಭಾಗಗಳಲ್ಲಿ ಮುಸುಕಿನ ಜೋಳಕ್ಕೆ ಬೂದು ಹಾಗೂ ಇತರ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಬೆಳೆ ಪರಿವರ್ತನೆ ಮಾಡಿಕೊಳ್ಳುವುದು ಅವಶ್ಯ ಎಂದು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಉಮಾಶಂಕರ್ ಸಲಹೆ ನೀಡಿದರು.
ಬೆಟ್ಟದಪುರ ಸಮೀಪದ ಚಿಕ್ಕಕಮರಹಳ್ಳಿ ಗ್ರಾಮದ ರೈತರ ಜಮೀನಿಗೆ ಮಂಗಳವಾರ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮುಸುಕಿನ ಜೋಳದಲ್ಲಿ ಕಂಡುಬರುತ್ತಿರುವ ರೋಗಗಳ ಬಗ್ಗೆ ಅಧ್ಯಯನ ನಡೆಸಿ ಬಳಿಕ ಮಾತನಾಡಿದ ಅವರು, ಮುಸುಕಿನ ಜೋಳ ಬೆಳೆಯನ್ನು ಪುನರಾವರ್ತಿತವಾಗಿ ಬೆಳೆದರೆ ರೋಗದ ಪ್ರಮಾಣ ಉಲ್ಬಣವಾಗಲಿದೆ. ಸತತವಾಗಿ ಮೂರು ಹಂಗಾಮುಗಳು ಅಥವಾ ಕನಿಷ್ಠ 1-2 ವರ್ಷ ಮುಸುಕಿನ ಜೋಳವನ್ನು ಬೆಳೆಯಬಾರದು. ಅದರ ಬದಲಾಗಿ ರಾಗಿ, ಸೋಯಾ ಅವರೆ, ಅಲಸಂದೆ ಮತ್ತು ತೊಗರಿ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡುವುದು ಸೂಕ್ತ ಎನ್ನಬಹುದು.
ಮುಸುಕಿನ ಜೋಳದಲ್ಲಿ ಕಾಣಿಸಿಕೊಳ್ಳುವ ರೋಗವು ಮಣ್ಣಿನಲ್ಲಿ ಇರುವ ರೋಗ ಕಣದ ಊಸೋರ್‌ಗಳು ಪ್ರಾಥಮಿಕ ಸೋಂಕಿನ ಮೂಲವಾಗಿದೆ. ಅದಕ್ಕೆ ಪೂರಕವಾದ ವಾತಾವರಣ ಲಭ್ಯವಾದಾಗ ಮೊಳಕೆಯೊಡೆದು ಬೇರುಗಳ ಮುಖೇನ ಗಿಡವನ್ನು ಹೊಕ್ಕುತ್ತವೆ. ಇದರಿಂದ ಬೆಳೆಯ ಬೆಳವಣಿಗೆಯಲ್ಲಿ ಕುಂಠಿತ, ಹಳದಿ ಬಣ್ಣದ ಗೆರೆಗಳು ಮತ್ತು ಎಲೆಗಳು ತಳಭಾಗದಲ್ಲಿ ಶಿಲೀಂಧ್ರದ ಬೂಸ್ಟ್ ಪುಡಿ ಬೆಳವಣಿಗೆಯನ್ನು ತೋರಿಸುತ್ತದೆ. ಇದರಿಂದ ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯದೆ ಬೆಳೆವಣಿಗೆ ಕುಂಠಿತವಾಗಿ ಇಳುವರಿ ನಷ್ಟವಾಗುತ್ತದೆ ಎಂದರು.
ಕೃಷಿ ಇಲಾಖೆಯ ತಾಲೂಕು ಕೃಷಿ ನಿರ್ದೇಶಕಿ ಬಿ.ಕೆ ಕುಸುಮಾ ಮಾತನಾಡಿ, ತಾಲೂಕಿನಲ್ಲಿ ಸುಮಾರು 8000 ಹೆ. ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆ ಬಿತ್ತನೆಯಾಗಿದೆ. ಬೆಳೆಗಳ ಬೆಳವಣಿಗೆ ಹಂತದಲ್ಲಿ ಕೇದಿಗೆ, ಬೂಜು ಅಂತಹ ರೋಗದ ಲಕ್ಷಣಗಳು ಕಂಡುಬರುತ್ತಿದೆ. ರೈತರು ಮುಸುಕಿನ ಜೋಳವನ್ನು ಮೇವಿನ ಉದ್ದೇಶಕ್ಕಾಗಿ (ಸೈಲೇಜ್) ಒಂದೇ ತಾಕಿನಲ್ಲಿ ವರ್ಷಕ್ಕೆ ಎರಡು-ಮೂರು ಬಾರಿ ಯಾವುದೇ ಬೀಜೋಪಚಾರ ಮಾಡದೆ ಹಾಗೂ ಪೊಟಾಶ್ ಮತ್ತು ಜಿಂಕ್ ಸಟ್ ಗೊಬ್ಬರ ಬಳಸದೇ ಸಾರಜನಕ ಹೆಚ್ಚಿರುವ ಗೊಬ್ಬರಗಳನ್ನು ಬಳಕೆ ಮಾಡಿರುವುದರಿಂದ ಈ ರೋಗವು ಉಲ್ಬಣವಾಗಿದೆ. ಹಾಗಾಗಿ ಕೃಷಿ ವಿಜ್ಞನಿಗಳು ಶಿಫಾರಸ್ಸು ಮಾಡಿರುವ ಔಷಧವನ್ನು ಸಂಪಡಿಸುವುದರ ಜತೆಗೆ ರೈತರು ಮುಸುಕಿನ ಜೋಳದ ಬದಲು ಬೆಳೆ ಪರಿವರ್ತನೆ ಮಾಡುಬೇಕೆಂದು ರೈತರಿಗೆ ಮನವಿ ಮಾಡಿದರು.
ಕೃಷಿ ಅಧಿಕಾರಿಗಳಾದ ಹಿತೇಶ್, ಮಹೇಶ್, ರೈತರಾದ ಕೃಷ್ಣ, ಸ್ವಾಗತ್, ಮಂಜುನಾಥ್, ಪ್ರದೀಪ್, ಪ್ರಕಾಶ್, ಚನ್ನೇಗೌಡ ಇದ್ದರು.