ಪಶು ಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಹಲವು ದೇವಾಲಯಗಳ ಜೀರ್ಣೋದ್ಧಾರಕ್ಕೆ ಧಾರ್ಮಿಕ ದತ್ತಿ (ಕಂದಾಯ) ಇಲಾಖೆಯು ಅನುದಾನ ಬಿಡುಗಡೆ ಆದೇಶವನ್ನು ಗುರುವಾರ ಹೊರಡಿಸಿದೆ.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿಯ ಶ್ರೀ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇಗುಲಕ್ಕೆ ಹದಿನೈದು ಲಕ್ಷ ರೂ., ಚಿಕ್ಕನೇರಳೆಯ ಶ್ರೀ ವೀರಾಂಜನೇಯ ಸ್ವಾಮಿ ದೇಗುಲ, ಹುಣಸೇಕುಪ್ಪೆಯ ಶ್ರೀಬಸವೇಶ್ವರ ದೇಗುಲ, ಆರ್.ಹೊಸಹಳ್ಳಿಯ ಶ್ರೀ ಕೊಳ್ಳಿಮಲ್ಲಪ್ಪ ದೇಗುಲ ಮತ್ತು ಪಂಚವಳ್ಳಿಯ ಶ್ರೀ ಬಸವೇಶ್ವರ ದೇಗುಲಗಳಿಗೆ ತಲಾ ಐದು ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ.
ಪಶು ಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಅವರು ತಾಲೂಕಿನ ಗ್ರಾಮಗಳಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಗ್ರಾಮದ ದೇಗುಲಗಳ ಜೀರ್ಣೋದ್ಧಾರ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ಕೋರಿ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ನೀಡಿದ ಮನವಿ ಹಿನ್ನೆಲೆ ಸಚಿವರು ಸರ್ಕಾರ ಮಟ್ಟದಲ್ಲಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ.
ಈಗಾಗಲೇ ಹಲವು ದೇವಸ್ಥಾನಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ಸಚಿವ ಕೆ.ವೆಂಕಟೇಶ್ ಹಾಗೂ ತಾಲೂಕು ಆಶ್ರಯ ಮತ್ತು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಸೇರಿದಂತೆ ಗಣ್ಯರು ಭೂಮಿಪೂಜೆ ನೆರವೇರಿಸಿದ್ದಾರೆ. ಈ ಅನುದಾನದಿಂದ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದು ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.