ಕುಡುಕೂರಿನಲ್ಲಿ ಶ್ರೀದೊಡ್ಡಮ್ಮ ತಾಯಿ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. 
ಮೈಸೂರು

ಕುಡುಕೂರಿನಲ್ಲಿ ವಿಜೃಂಭಣೆಯ ದೊಡ್ಡಮ್ಮ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • Festival in Kudukkur
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕುಡುಕೂರಿನಲ್ಲಿ ಶ್ರೀದೊಡ್ಡಮ್ಮ ತಾಯಿ ರಥೋತ್ಸವವು ಶುಕ್ರವಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಐದು ವರ್ಷಗಳ ಬಳಿಕ ಈ ಭಾಗದ ಭಕ್ತರೆಲ್ಲ ಒಟ್ಟಾಗಿ ಸೇರಿ ದೇವಿಯ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ದೊಡ್ಡಮ್ಮ ದೇವಿಯ ರತ್ನ ಖಚಿತ ಹಾಗೂ ಬಸಪ್ಪ ಉತ್ಸವ ಮೂರ್ತಿಗಳನ್ನು ಇಲ್ಲಿನ ಶ್ರೀಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿರುವ ಗವಿಯಿಂದ ಪರಂಪರೆ ಹಾಗೂ ಶಾಸ್ತೋಕ್ತ ಪೂಜೆ ಸಲ್ಲಿಸಲಾಯಿತು. ಬಳಿಕ ಬೆಟ್ಟದಿಂದ ಮೆಗಲಕೊಪ್ಪಲು, ಕೆಳಗಿನ ಕೊಪ್ಪಲು, ಕುಡಕೂರು ಕೊಪ್ಪಲು ಹಾಗೂ ಕುಡಕೂರು ಗ್ರಾಮಗಳಲ್ಲಿ ರಾತ್ರಿ ಇಡೀ ವಾದ್ಯದೊಂದಿಗೆ ಸಡಗರದಿಂದ ಮೆರವಣಿಗೆ ನಡೆಯಿತು. ಬಳಿಕ ರತ್ನ ಖಚಿತ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ನೂರಾರು ಮಂದಿ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಇದೆ ವೇಳೆ ದೇವಿಯ ಹೆಸರಿನಲ್ಲಿ ಹರಕೆ ಮಾಡಿಕೊಂಡವರು ವಿವಿಧ ರೀತಿಯಲ್ಲಿ ಹರಕೆ ತೀರಿಸಿದರು, ಹಲವು ಭಕ್ತರು ದೇಗುಲದ ಬಳಿ ಕೊಂಡ ಹಾಯ್ದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.
ಗ್ರಾಮದ ಮುಖಂಡರಾದ ಕೆ.ವಿ ಜಯಪ್ರಕಾಶ್ ರಾಜೇ ಅರಸು, ಪಟೇಲ್ ಪುಟ್ಟಸ್ವಾಮಿ, ರೈತ ಸಂಘದ ಮುಖಂಡ ಕೆ.ಜಿ ಪ್ರಕಾಶ್ ರಾಜೇ ಅರಸು, ಹರೀಶ್ ರಾಜೇ ಅರಸ್, ಚಿಕ್ಕಣ್ಣ ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತರು ಇದ್ದರು.