ಮೈಸೂರಿನಲ್ಲಿ ಭಾನುವಾರ ಬಸವ ಜಯಂತಿಯ ಅದ್ದೂರಿ ಮೆರವಣಿಗೆ ನಡೆಯಿತು
ಮೈಸೂರು: ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳ ವತಿಯಿಂದ 2 ದಿನಗಳ ಕಾಲ ಆಯೋಜಿಸಿರುವ ಬಸವ ಜಯಂತಿ ಅಂಗವಾಗಿ ಭಾನುವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಣ್ಮನ ಸೆಳೆಯುವ ವೈಭವಯುತ ಮೆರವಣಿಗೆ ನಡೆಯಿತು.
ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವೃತ್ತದ ಬಳಿ ಇರುವ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ನಂತರ ಜೆಎಸ್‌ಎಸ್ ಮಹಾವಿದ್ಯಾಪೀಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಬಸವರಾಜ ಹೊರಟ್ಟಿ, ರಾಜ್ಯದ ಯಾವುದೇ ಭಾಗದಲ್ಲೂ ಮೈಸೂರಿನ ರೀತಿಯಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡುವುದನ್ನು ನಾನು ನೋಡಿಲ್ಲ. ಮೈಸೂರಿನಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಯೋಜಿಸುತ್ತಿರುವುದು ಸಂತಸ ಮತ್ತು ಹೆಮ್ಮೆಯ ವಿಚಾರ ಎಂದರು.
ಬಸವಣ್ಣ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಎಲ್ಲ ಸಮುದಾಯದವರಿಗೆ ಅವರು ಆಶ್ರಯದಾತರಾಗಿದ್ದರು. ಅವರ ಬಳಿ ಜಾತಿ, ಧರ್ಮ ಎಂಬುದು ಇರಲಿಲ್ಲ. ಇಂತಹ ಬಸವಣ್ಣ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಬಸವ ಜಯಂತಿ ಆಚರಣೆ ಮಾಡುವುದರ ಜತೆಗೆ ಬಸವಣ್ಣ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಬಸವಣ್ಣ ಕೇವಲ ಒಬ್ಬರು ವ್ಯಕ್ತಿಯಲ್ಲ, ಅವರೊಬ್ಬರು ಶಕ್ತಿಯಾಗಿದ್ದರು. ಅವರು ಎಲ್ಲರನ್ನು ಸಮಾನವಾಗಿ ಕಂಡರು. ಹೆಣ್ಣು ಗಂಡು ಹಾಗೂ ಜಾತಿ ಬೇದ ಅವರಲ್ಲಿ ಇರಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಶ್ರೀ ಕುದೇರು ಮಠದ ಇಮ್ಮಡಿ ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಕುಂದೂರು ಮಠದ ಶ್ರೀ ಡಾ.ಶರತ್ಚಂದ್ರ ಸ್ವಾಮೀಜಿ, ಬೆಟ್ಟದಪುರದ ಶ್ರೀ ಸಲಿಲಾಖ್ಯ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಬರಡನಪುರದ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ, ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಶಿವಕುಮಾರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಟಿ ಅನುಪ್ರಭಾಕರ್, ಕಿರುತೆರೆ ನಟ ಕಾರ್ತಿಕ್ ಮಹೇಶ್, ಬಸವ ಜಯಂತಿ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಬಸವ ಜಯಂತಿ ಸಮಿತಿ ಪದಾಧಿಕಾರಿಗಳಾದ ಕೆ.ವಿ.ಮಲ್ಲೇಶ, ಆಯರಹಳ್ಳಿ ವಿರೂಪಾಕ್ಷ ಮತ್ತಿತರರು ಇದ್ದರು.
ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವೃತ್ತದಿಂದ ಕಲಾಮಂದಿರವರೆಗೆ ಬಸವೇಶ್ವರ ಪ್ರತಿಮೆಯನ್ನು ಸಾರೋಟಿನಲ್ಲಿ ಕೂರಿಸಿ ಅದ್ದೂರಿಯ ಮೆರವಣಿಗೆ ನಡೆಸಲಾಯಿತು.
ನಂದಿಧ್ವಜ, ಮಂಗಳವಾದ್ಯ, ವೀರಗಾಸೆ, ಚಂಡೆ, ಡೊಳ್ಳು ಕುಣಿತ, ಯಕ್ಷಗಾನ ಕಲಾವಿದರು ಮೆರವಣಿಗೆಗೆ ಮೆರಗು ತಂದುಕೊ ಟ್ಟರು. ಮೆರವಣಿಯಲ್ಲಿ ಭಜನಾ ಮೇಳದವರು ಆಕರ್ಷಿಸಿದರು. ಅಲಂಕೃತಗೊಂಡಿದ್ದ ವಾಹನಗಳಲ್ಲಿ ಭಜನಾ ತಂಡಗಳು ವಚನಗಳನ್ನು ಹಾಡುತ್ತಾ ಸಾಗಿದವು. ವಿವಿಧ ಬಸವ ಬಳಗಗಳು ತಯಾರಿಸಿದ್ದ ಅನುಭವ ಮಂಟಪ ಸ್ತಬ್ಧ ಚಿತ್ರಗಳು ಎಲ್ಲರ ಮನಸೂರೆಗೊಳ್ಳುವಂತೆ ಮಾಡಿತು. ಸುತ್ತೂರಿನ ಜೆಎಸ್‌ಎಸ್ ವಸತಿ ಶಾಲೆಯಲ್ಲಿ ಓದುತ್ತಿರುವ ಈಶಾನ್ಯ ರಾಜ್ಯದ ಮಕ್ಕಳ ತಂಡವು ವಚನಗಾಯನ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಸವಣ್ಣನ ವೇಷಧರಿಸಿದವರು ಕುದುರೆ ಮೇಲೆ ಕುಳಿತು ಸಂಚಾರ ಮಾಡಿದರು. ಮಕ್ಕಳು, ಯುವಕರು, ಮಧ್ಯವಯಸ್ಕರು ಬಸವಣ್ಣನಂತೆ ಶ್ವೇತವಸ್ತ್ರ, ತಲೆಯ ಮೇಲೆ ಕೀರಿಟ ಧರಸಿ ಗಮನ ಸೆಳೆದರು. ಬಸವ ಬಳಗಗಳ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು 20ಕ್ಕೂ ಹೆಚ್ಚು ಸಾರೋಟಿನಲ್ಲಿ ಕುಳಿತು ಸಾಗುವ ಮೂಲಕ ಮೆರವಣಿಗೆಯ ರಂಗು ಹೆಚ್ಚಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಯುವಕರು ಡಿಜೆಯಿಂದ ಹೊರಹೊಮ್ಮುತ್ತಿದ್ದ ಧ್ವನಿಯ ಹಾಡಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯು ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವೃತ್ತದಿಂದ ಪ್ರಾರಂಭಗೊಂಡು ಬಸವೇಶ್ವರ ವೃತ್ತ, ನ್ಯೂ ಸಯ್ಯಜಿ ರಾವ್ ರಸ್ತೆ, ಮಹಾನಗರ ಪಾಲಿಕೆ, ಕೆ.ಆರ್.ಸರ್ಕಲ್, ಡಿ.ದೇವರಾಜ ಅರಸು ರಸ್ತೆ, ಮಹಾರಾಣಿ ಕಾಲೇಜು ವೃತ್ತ, ಹುಣಸೂರು ರಸ್ತೆಯಲ್ಲಿ ಸಾಗಿ ಕಲಾಮಂದಿರದಲ್ಲಿ ಅಂತ್ಯಗೊಂಡಿತು.