ಕರ್ನಾಟಕ ರಾಜ್ಯ ಜ್ಯೋತಿಷರು ಹಾಗೂ ಜ್ಯೋತಿಷ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿಯಾಗಿದ್ದರು. ಬಿ.ಎನ್.ಅನಂತರಾಘವನ್, ಗಜೇಂದ್ರ, ಡಾ.ಕುಮಾರ್ ವಶಿಷ್ಠ, ವಿದ್ವಾನ್ ಮೂಗೂರು ಮಧುದೀಕ್ಷಿತ್, ಹರಿದಾಸ್ ಇತರರು ಇದ್ದರು.
- ಜ್ಯೋತಿಷದ ಪ್ರಸ್ತುತ ಸ್ಥಿತಿ, ದೇಶದ ಭವಿಷ್ಯ ಹಾಗೂ ಜ್ಯೋತಿಷ ಶಿಕ್ಷಣದ ಕುರಿತು ನಿಯೋಗದ ಸದಸ್ಯರೊಂದಿಗೆ ಮಾತುಕತೆ
- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೂಲಕ ನಡೆಯುತ್ತಿರುವ ಜ್ಯೋತಿಷ ಸರ್ಟಿಫಿಕೇಟ್, ಡಿಪ್ಲೊಮಾ ಹಾಗೂ ಅಡ್ವಾನ್ಸ್ ಡಿಪ್ಲೊಮಾ ತರಗತಿಗಳ ಕುರಿತು ಮಾಹಿತಿ
ಮೈಸೂರು:ಕರ್ನಾಟಕ ರಾಜ್ಯ ಜ್ಯೋತಿಷರು ಹಾಗೂ ಜ್ಯೋತಿಷ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಜ್ಯೋತಿಷ ವಿಭಾಗದ ಸರ್ಟಿಫಿಕೇಟ್, ಡಿಪ್ಲೊಮಾ ಹಾಗೂ ಅಡ್ವಾನ್ಸ್ ಡಿಪ್ಲೊಮಾ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ಗಣಪತಿ ವಿಗ್ರಹ ನೀಡಿ ಶುಭ ಕೋರಿದ ರಾಜ್ಯಪಾಲರು, ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಜ್ಯೋತಿಷದ ಪ್ರಸ್ತುತ ಸ್ಥಿತಿ, ದೇಶದ ಭವಿಷ್ಯ ಹಾಗೂ ಜ್ಯೋತಿಷ ಶಿಕ್ಷಣದ ಕುರಿತು ನಿಯೋಗದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ದೇಶದ ಭವಿಷ್ಯವು ಉತ್ತಮವಾಗಿದ್ದು, ಭಾರತೀಯ ಜ್ಞಾನ ಪರಂಪರೆಯ ಭಾಗವಾಗಿರುವ ಜ್ಯೋತಿಷ ಶಾಸ್ತ್ರದ ಬಗ್ಗೆ ಸಮಾಜದಲ್ಲಿ ಜಾಗೃತಿ ಹಾಗೂ ವೈಜ್ಞಾನಿಕ ಅಧ್ಯಯನದ ಆಸಕ್ತಿ ಹೆಚ್ಚುತ್ತಿರುವುದಾಗಿ ಪದಾಧಿಕಾರಿಗಳು ವಿವರಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೂಲಕ ನಡೆಯುತ್ತಿರುವ ಜ್ಯೋತಿಷ ಸರ್ಟಿಫಿಕೇಟ್, ಡಿಪ್ಲೊಮಾ ಹಾಗೂ ಅಡ್ವಾನ್ಸ್ ಡಿಪ್ಲೊಮಾ ತರಗತಿಗಳ ಕುರಿತು ಮಾಹಿತಿ ನೀಡಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಕೋರ್ಸ್‌ಗಳಲ್ಲಿ ಭಾಗವಹಿಸಿ ಶಾಸ್ತ್ರೀಯ ಹಾಗೂ ವ್ಯವಸ್ಥಿತ ಜ್ಯೋತಿಷ ಶಿಕ್ಷಣ ಪಡೆಯುತ್ತಿರುವುದು, ಜ್ಯೋತಿಷ ಶಾಸ್ತ್ರದ ಸಂರಕ್ಷಣೆ, ಪ್ರಸಾರ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಒಕ್ಕೂಟ ಮತ್ತು ವಿವಿಧ ಜ್ಯೋತಿಷ ಸಂಸ್ಥೆಗಳು ಕೈಗೊಳ್ಳುತ್ತಿರುವ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳ ಬಗ್ಗೆಯೂ ತಿಳಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಬಿ.ಎನ್.ಅನಂತರಾಘವನ್, ಮುಖ್ಯ ಕಾರ್ಯದರ್ಶಿ ಗಜೇಂದ್ರ, ಖಜಾಂಚಿ ಡಾ.ಕುಮಾರ್ ವಶಿಷ್ಠ, ಸಂಘಟನಾ ಕಾರ್ಯದರ್ಶಿ ವಿದ್ವಾನ್ ಮೂಗೂರು ಮಧುದೀಕ್ಷಿತ್, ಉಪಾಧ್ಯಕ್ಷ ಹರಿದಾಸ್ ಇತರರು ಇದ್ದರು.