ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಲಗೈ ಮೀಸಲಾತಿ ಹೋರಾಟ ಸಮಿತಿಯ ಸಭೆಯಲ್ಲಿ ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ ಮಾತನಾಡಿದರು. ಎನ್.ಲಿಂಗಪ್ಪಾಜಿ, ಆಲಗೂಡು ಎಸ್ ಚಂದ್ರಶೇಖರ್, ಎ.ಶಿವಕುಮಾರ್, ಎಂ.ಕೆ.ಸಿದ್ದರಾಜು, ಬಿ.ಮಹದೇವಸ್ವಾಮಿ, ನಾಗರಾಜ ಮೂರ್ತಿ ಇತರರು ಇದ್ದರು. 
ಮೈಸೂರು

ಒಳಮೀಸಲಾತಿಯಲ್ಲಿ ಸರ್ಕಾರ ದ್ವಂದ್ವ ನಿಲುವು

ಲೋಕೇಶ್ ಮನು. ಡಿ
ತಿ.ನರಸೀಪುರ: ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವಂದ್ವ ನಿಲುವು ಹೊಂದಿದೆ ಎಂದು ಬಲಗೈ ಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ ಆರೋಪಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಹಿಂದಿನ ಮೀಸಲಾತಿಯಂತೆ ಪ್ರಸ್ತುತ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ಹೇಳಿ, ಬಳಿಕ ಒಳ ಮೀಸಲಾತಿ ಅನ್ವಯ ನೇಮಕಾತಿ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಿಳಿಸುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಒಳ ಮೀಸಲಾತಿ ಜಾರಿಗೆ ಪ.ಜಾತಿ ಸಮುದಾಯಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಿದ್ದು, ಒಂದು ವೇಳೆ ಒಳ ಮೀಸಲು ಜಾರಿಯಾದಲ್ಲಿ ಪ್ರವರ್ಗ ಬಿನಲ್ಲಿ ಬರುವ ಬಲಗೈ, ಹೊಲಯ ಸಂಬಂಧಿತ ಜಾತಿಗಳಿಗೆ ಭವಿಷ್ಯದಲ್ಲಿ ಮೀಸಲಾತಿಯನ್ನು ವ್ಯವಸ್ಥಿತವಾಗಿ ವಂಚಿಸುವ ಹುನ್ನಾರ ಮಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ.ಜಾತಿಯ ಮಾದಿಗ ಸಮುದಾಯ ಒಳಮೀಸಲಾತಿ ಕೇಳುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳನ್ನು ಆಗ್ರಹಿಸದೆ ಹೋರಾಟದ ವೇಳೆ ಬಲಗೈ ಸಮುದಾಯದ ಪ್ರತಿನಿಧಿಗಳನ್ನು ಕೆಟ್ಟದಾಗಿ ನಿಂದಿಸಿ, ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ. ವಕೀಲರಾಗಿ ಎಸ್.ಅರುಣ್‌ಕುಮಾರ್ ಒಳಮೀಸಲಾತಿ ಜಾರಿಯಾಗದಿದ್ದರೆ ರಕ್ತಕ್ರಾಂತಿ ಆಗುತ್ತದೆ ಎಂದಿದ್ದಾರೆ. ಒಳಮೀಸಲಿಗೆ ಯಾರನ್ನು ಬಲಿ ಕೊಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹೋರಾಟ ಮಾಡುವಾಗ ಸಾಮಾಜಿಕ ಮತ್ತು ನೈತಿಕ ಪ್ರಜ್ಞೆ ಇರಬೇಕು ಎಂದರು.
ರೋಸ್ಟರ್ ಬಿಂದು ಸರಿ ಇಲ್ಲದ್ದರಿಂದ ಈಗಾಗಲೇ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಒಳಮೀಸಲಾತಿಯನ್ನು ಜಾರಿಗೊಳಿಸಬಾರದು. ಒಳಮೀಸಲು ಮಾಡುವುದಾದರೆ ರೋಸ್ಟರ್ ಲೋಪ ಸರಿಪಡಿಸಿ, ಆಯ್ಕೆ ಪ್ರಕ್ರಿಯೆ ನಡೆಸಬೇಕು. ಬಲಗೈ ಸಂಬಂಧಿತ ಜಾತಿಗಳನ್ನು ವಂಚಿಸಲು ಮುಂದಾದರೆ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್.ಲಿಂಗಪ್ಪಾಜಿ ಮಾತನಾಡಿ, ರಾಜ್ಯ ಸರ್ಕಾರ ಪ.ಜಾತಿ ಮತ್ತು ಪ.ಪಂಗಡ ಅಭಿವೃದ್ಧಿ ಮೀಸಲು ಹಣವನ್ನು ಪದೇ ಪದೆ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ಇದರಿಂದ ಮುಖ್ಯಮಂತ್ರಿಗಳ ಮೇಲೆಯೇ ದೌರ್ಜನ್ಯ ಪಕರಣ ದಾಖಲಿಸಬೇಕು. ಅವೈಜ್ಞಾನಿಕ ರೋಸ್ಟರ್ ಬಿಂದು ರೂಪಿಸಿ, ಒಳಮೀಸಲಾತಿಯನ್ನು ಗೊಂದಲ ಗೂಡಾಗಿ ಪರಿವರ್ತಿಸಿ ಪರಿಶಿಷ್ಟ ಜಾತಿಯ ಸಮುದಾಯಗಳ ನಡುವೆ ಸಂಘರ್ಷ ತಂದಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗಿಯ ಮಟ್ಟದ ಸಂಘಟನಾ ಸಂಚಾಲಕ ಆಲಗೂಡು ಎಸ್.ಚಂದ್ರಶೇಖರ್ ಹಾಗೂ ಹಿರಿಯ ಜಿಲ್ಲಾ ಸಂಚಾಲಕ ಕುಕ್ಕುರು ರಾಜು, ಯುವ ಮುಖಂಡ ಸೊಸ್ಲೇ ಎ.ಶಿವಕುಮಾರ್(ಬಡ್ಡು) ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ ಮೂಗೂರು ಎಂ.ಕೆ.ಸಿದ್ದರಾಜು, ಎಂ.ಆರ್.ಸುಂದರ್, ಯರಗನಹಳ್ಳಿ ಬಿ.ಮಹದೇವಸ್ವಾಮಿ, ಅಂಕನಹಳ್ಳಿ ಪುಟ್ಟರಾಜು, ಹೆಬ್ಬೆಹುಂಡಿ ನಿಂಗರಾಜು, ಧರ್ಮರತ್ನ ಕುಮಾರ, ಸೋಸಲೆ ರಾಜಣ್ಣ(ಮಲ್ಲು), ಎಸ್.ವಿ.ಮಹೇಶ್ ಕುಮಾರ್, ಎಸ್.ಕೆ.ಶಿವಕುಮಾರ್, ಕೊಳತ್ತೂರು ಪಿ.ಮಹದೇವಸ್ವಾಮಿ, ರವಿಪ್ರಸಾದ್, ಮಾವಿನಹಳ್ಳಿ ರಾಜೇಶ್, ಚೌಹಳ್ಳಿ ಪರಶುರಾಮ್, ಯಾಕನೂರು ರಾಜಪ್ಪ, ನೀಲಸೋಗೆ ಬಸವರಾಜು, ಬನ್ನೂರು ಶಿವಮೂರ್ತಿ, ಎಲ್.ಉಮಾಪತಿ, ಯಡದೊರೆ ನಿರಂಜನ್, ಡಿ.ಎಸ್. ಪ್ರೇಮಕುಮಾರ್, ಕುಕ್ಕೂರು ನಾಗರಾಜು ಮೂರ್ತಿ, ಪ್ರಭು ಇದ್ದರು.