ಸರ್ಕಾರಿ ಶಾಲೆ 
ಮೈಸೂರು

ಸರ್ಕಾರಿ ಶಾಲೆಗಳ ಆಸ್ತಿಗೆ ಸಂಚಕಾರ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಶೇ.27.18 ಸ್ಕೂಲ್‌ಗಳ ಸ್ವತ್ತು ನೋಂದಣಿಗೆ ನಿರ್ಲಕ್ಷ್ಯ
  • ದಾನಿಗಳ ವಾರಸುದಾರರಿಂದ ಕೊರ್ಟ್ ಮೊರೆ
ಮೈಸೂರು: ಜಿಲ್ಲೆಯಲ್ಲಿ ಬಹಳಷ್ಟು ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿಯೇ ಆಗಿಲ್ಲ. ಇದು ಭೂಒತ್ತುವರಿ, ವ್ಯಾಜ್ಯಕ್ಕೆ ಕಾರಣವಾಗಿದೆ. ಜತೆಗೆ ಶಿಕ್ಷಣ ಇಲಾಖೆಯ ಆಸ್ತಿಗೆ ಸಂಚಕಾರ ಎದುರಾಗಿದೆ.
ಜಿಲ್ಲೆಯಲ್ಲಿ ಶೇ.27.18 ಸರ್ಕಾರಿ ಶಾಲೆಗಳ ಆಸ್ತಿ ಇನ್ನೂ ನೋಂದಣಿಯೇ ಆಗಿಲ್ಲ. ಇವುಗಳ ಜಾಗ ಭೂ ಒಡೆತನವೂ ಖಾತ್ರಿಯಾಗದಿರುವುದು ಅಚ್ಚರಿ ಮೂಡಿಸಿದೆ. ಸರ್ಕಾರಿ ಜಾಗದ ಅತಿಕ್ರಮಣಕ್ಕೆ ಅವಕಾಶ ಮಾಡಿಕೊಟ್ಟಿದೆ.
ಜಿಲ್ಲೆಯ 2,094 ಸರ್ಕಾರಿ ಶಾಲೆಗಳ ಪೈಕಿ 569 ಶಾಲೆಗಳ ಆಸ್ತಿಗಳ ಮಾಲೀಕತ್ವ ನಿಗದಿಯಾಗಿಲ್ಲ. ಆಯಾಯ ಶಾಲೆಗಳ ಸ್ಥಿರಾಸ್ತಿ ಅವುಗಳ ಹೆಸರಿನಲ್ಲಿಲ್ಲ. ಹೀಗಾಗಿ, ಅವುಗಳ ಆಸ್ತಿ ಸದ್ಯಕ್ಕೆ ಅಡಕತ್ತರಿಯಲ್ಲಿ ಸಿಲುಕಿದೆ.
ಶಾಲೆ ಆರಂಭದಲ್ಲಿ ಜಮೀನನ್ನು ದಾನವಾಗಿ ನೀಡಿರುವುದು ಅಥವಾ ಮೌಖಿಕವಾಗಿ ಹಸ್ತಾಂತರಿಸಿರುವ ಸಂದರ್ಭದಲ್ಲಿ ನೋಂದಾಯಿತ ಮಾರಾಟ ಪತ್ರ ಅಥವಾ ದಾನಪತ್ರ ಮಾಡಿಸಿಲ್ಲ. ಕೆಲ ಶಾಲೆಗಳ ಭೂದಾಖಲಾತಿಗಳಿಲ್ಲ. ಒಂದಷ್ಟು ಪ್ರಕರಣಗಳಲ್ಲಿ ಹಿಂದೆ ಶಾಲೆಗಳಿಗೆ ದಾನ ನೀಡಿದವರು ನಕಲಿ ದಾಖಲೆ ಸೃಷ್ಟಿಸಿ ದಾನ ನೀಡಿಲ್ಲ. ನಮ್ಮದೇ ಜಾಗ ಎಂದು ಈಗ ವಾದಿಸುತ್ತಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ದಾನ ನೀಡಿದ ಸಮಯದಲ್ಲಿ ಆ ಜಾಗವನ್ನು ಶಾಲೆ ಹೆಸರಿಗೆ ನೋಂದಣಿ ಆಗದೆ ಅಸಡ್ಡೆ ತೋರಲಾಗಿದೆ. 
ಭೂಮಿ ಬೆಲೆ ಹೆಚ್ಚಾದಂತೆ ಕುಟುಂಬದ ವಾರಸುದಾರರು ಪೂರ್ವಜರು ದಾನ ಮಾಡಿರುವ ಬಗ್ಗೆ ಯಾವುದೇ ಮಾಹಿತಿ, ದಾಖಲೆಗಳಿಲ್ಲ. ಇದಕ್ಕೆ ನಮ್ಮ ಸಮ್ಮತಿಯೂ ಇಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲ ಶಾಲೆಗಳ ಜಾಗ ಭೂಗಳ್ಳರಿಂದ ಒತ್ತುವರಿಯಾಗಿರುವುದೂ ಇದೆ. ಆದ್ದರಿಂದ ತಕ್ಷಣವೇ ಸರ್ಕಾರಿ ಶಾಲೆಗಳ ಜಾಗವನ್ನು ಅತಿಕ್ರಮಣ ತಡೆಯಲು ಮತ್ತು ಆಸ್ತಿ ಸಂರಕ್ಷಿಸಬೇಕಿದೆ. ‘ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಅಭಿಯಾನ’ ಚುರುಕುಗೊಳಿಸಬೇಕಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಆಸ್ತಿ ಕೈತಪ್ಪದಂತೆ ಕ್ರಮ ವಹಿಸಬೇಕಿದೆ. ಈ ಕುರಿತು ಸಂಗ್ರಹಿಸಿರುವ ಜನಾಭಿಪ್ರಾಯ ಇಲ್ಲಿದೆ

ಇ-ಆಸ್ತಿ ವ್ಯವಸ್ಥೆ ಬಂದಾಗಿನಿಂದ ಸುಲಭ

ಸರ್ಕಾರಿ ಶಾಲಾ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ ಆಯಾಯ ಶಾಲೆ ಹೆಸರಿಗೆ ನೋಂದಣಿ ಮಾಡಿಸಲಾಗುತ್ತಿದೆ. ಆಸ್ತಿ ಮಾಲೀಕತ್ವದ ದಾಖಲೆಯ ಡಿಜಿಟಲ್ ರೂಪದಲ್ಲಿ ಪಡೆಯುವ ಇ-ಆಸ್ತಿ ವ್ಯವಸ್ಥೆ ಜಾರಿಯಾದ ಮೇಲೆ ಶಾಲಾ ಆಸ್ತಿ ನೋಂದಣಿ ಸುಲಭಗೊಂಡಿದೆ. ಕೆಲ ದಾಖಲಾತಿ ಆಧಾರದ ಮೇಲೆ ನೋಂದಣಿಯಾಗುತ್ತಿದೆ.
 ಡಿ. ಉದಯಕುಮಾರ್
ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ

ಒತ್ತುವರಿಯಾಗದಂತೆ ರಕ್ಷಣೆ

ಸರ್ಕಾರಿ ಶಾಲೆಗಳು, ಕಾಲೇಜುಗಳ ಜಾಗ ಒತ್ತುವರಿಯಾಗದಂತೆ ರಕ್ಷಣೆ ಮಾಡಲಾಗುತ್ತಿದೆ. ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಜತೆಗೆ ಹಕ್ಕುಪತ್ರ ಕೊಡಿಸುವ ಕೆಲಸ ನಡೆಸಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗಲ್ಲ.
 ಜಿ.ಟಿ. ದೇವೇಗೌಡ, ಶಾಸಕ

ಸಮಿತಿ ರಚನೆ ಅಗತ್ಯ 

ಜಿಲ್ಲೆಯ ಅನೇಕ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಮತ್ತು ಜಾಗಗಳು ಅಧಿಕೃತವಾಗಿ ನೋಂದಣಿಯಾಗದಿರುವುದು ಆತಂಕಕಾರಿ. ತಕ್ಷಣವೇ ಸರ್ವೇ ನಡೆಸಿ, ಅವುಗಳನ್ನು ದೃಢೀಕರಿಸಿ ಉಪನೋಂದಣಿ ಕಚೇರಿಯಲ್ಲಿ ವ್ಯವಸ್ಥಿತವಾಗಿ ನೋಂದಾಯಿಸಬೇಕು. ಈ ಮೂಲಕ ಸರ್ಕಾರಿ ಸ್ವತ್ತನ್ನು ರಕ್ಷಿಸಬೇಕು. ಜತೆಗೆ, ಗ್ರಾಮಮಟ್ಟದಲ್ಲಿ ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ ರಚಿಸಿ, ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಗಳ ಆಸ್ತಿ ಹಾಗೂ ಭೂ ಒಡೆತನವನ್ನು ಖಾತ್ರಿಪಡಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ.
  ಸುಭಾಷ್ ಬೆಟ್ಟದ ಕೊಪ್ಪ
ರಾಜ್ಯ ಖಜಾಂಚಿ, ಎಐಡಿಎಸ್‌ಒ

ದಾನಿಗಳ ಆಸ್ತಿ ಲಪಟಾಯಿಸದಿರಿ

ಕೆಪಿಎಸ್ ಮ್ಯಾಗ್ನೆಟ್ ಸ್ಕೂಲ್ ಯೋಚನೆಯಡಿ ಸರ್ಕಾರವು ಸಹಸ್ರಾರು ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಮುಚ್ಚಲು ಹೊರಟಿದೆ. ಈ ಸಂದರ್ಭದಲ್ಲಿ ಅವರಿಗೆ ಸರ್ಕಾರಿ ಶಾಲೆಗಳು ನೋಂದಣಿ ಆಗದೆ ಇರುವುದು ಆಸ್ತಿಯನ್ನು ಲಪಟಾಯಿಸಲು ಅನುಕೂಲವಾಗಿದೆ. ಶಾಲೆಗಳನ್ನು ಪ್ರತಿ ಊರಿನ ದಾನಿಗಳು, ಶಿಕ್ಷಣ ಪ್ರೇಮಿಗಳು ಮಕ್ಕಳ ಶೈಕ್ಷಣಿಕ ಉದ್ಧಾರಕ್ಕಾಗಿ ನೀಡಿರುವ ಅಮೂಲ್ಯ ಕೊಡುಗೆ. ದಾನಿಗಳು ನೀಡಿರುವ ಈ ಆಸ್ತಿಯನ್ನು ಯಾರು ಲಪಟಾಯಿಸಬಾರದು. ಸರ್ಕಾರಿ ಶಾಲೆಗಳನ್ನೂ ಯಾವ ಕಾರಣಕ್ಕೂ ಮುಚ್ಚಬಾರದು.

 ಆಸಿಯಾ ಬೇಗಂ

ಜಿಲ್ಲಾ ಸಂಚಾಲಕರು, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ 

ರಾಜ್ಯಮಟ್ಟದಲ್ಲೇ ಸಮಸ್ಯೆಗೆ ಪರಿಹಾರ

50-60 ವರ್ಷಗಳ ಹಿಂದೆ ಭೂದಾನ ಕೊಟ್ಟ ಜಾಗದಲ್ಲಿರುವ ಸರ್ಕಾರಿ ಶಾಲೆಗಳು ಭೂಒಡೆತನದ ಕುರಿತು ಸೂಕ್ತ ದಾಖಲೆಗಳಿಲ್ಲ. ಇದ್ದರೂ ಅಪ್‌ಡೇಟ್ ಆಗಿಲ್ಲ. ಆದರೆ, ಸದ್ಯಕ್ಕೆ ಶಾಲಾ ಆಸ್ತಿ ಅನುಭೋಗದಲ್ಲೇ ಮಾತ್ರ ಇದೆ. ಇದು ಅನೇಕ ಸವಾಲುಗಳು, ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ. ಆದ್ದರಿಂದ ರಾಜ್ಯಮಟ್ಟದಲ್ಲೇ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕಿದೆ.
 ಅರಿಯೂರು ವಿಜಯ್‌ಕುಮಾರ್,  ಸಾರ್ವಜನಿಕರು

ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ

ಶಿಕ್ಷಣ ಇಲಾಖೆ ಡಿಡಿಪಿಐ, ಬಿಇಒಗಳಿಗೆ ನಿರ್ದೇಶಿಸಿದೆ. ಆದರೆ, ಈ ಬಗ್ಗೆ ಕ್ರಮ ವಹಿಸಬೇಕಾದ ಪಿಡಿಒಗಳು, ಕಂದಾಯ ಇಲಾಖೆಯ ಅಧಿಕಾರಿಗಳ ನಿರಾಸಕ್ತಿ, ಇಚ್ಛಾಶಕ್ತಿಯ ಕೊರತೆಯಿಂದ ನೋಂದಣಿ ಆಗುತ್ತಿಲ್ಲ. ಬಹುತೇಕ ಸರ್ಕಾರಿ ಶಾಲೆಗಳ ಆಸ್ತಿಗಳು 30-40 ವರ್ಷಗಳ ಹಿಂದೆ ದಾನಿಗಳಿಂದ ಕೊಡಲ್ಪಟ್ಟಿರುತ್ತವೆ. ಆದರೆ, ದಾನಪತ್ರಗಳಿಲ್ಲ. ಇದರಿಂದ ನೋಂದಣಿ ಕಷ್ಟವಾಗಿದೆ. ಭೂಮೌಲ್ಯ ಹೆಚ್ಚಾಗುತ್ತಿರುವುದರಿಂದ ದಾನಿಗಳ ಕುಟುಂಬದವರು ಭೂಮಿಯನ್ನು ವಾಪಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದಾಗಿ ಪಿಡಿಒಗಳು ಖಾತೆ ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಪ್ರಬಲ ಕಾಯ್ದೆಯಾಗಿ ನಿಯಮಗಳನ್ನು ಸರಳೀಕರಣಗೊಳಿಸಿ ಶಿಕ್ಷಣ, ಕಂದಾಯ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು.
 ಬಿ.ಎನ್.ಶಿವರಾಮೇಗೌಡ, ನಿವೃತ್ತ ಬಿಇಒ

ಅಸ್ಪಷ್ಟ ದಾಖಲೆಗಳಿಂದ ವಿವಾದ 

ಭೂಮಿ ಮಾಲೀಕತ್ವ ದಾಖಲೆಗಳು (ಆರ್‌ಟಿಸಿ, ಪಹಣಿ, ಹಕ್ಕುಪತ್ರ ಇತ್ಯಾದಿ) ಸ್ಪಷ್ಟವಾಗಿರಬೇಕು. ಜತೆಗೆ, ಶಾಲೆಯ ಹೆಸರಿನಲ್ಲಿ ದಾಖಲಾಗಿರಬೇಕು. ಇಲ್ಲವಾದರೆ ಒತ್ತುವರಿ, ಮಾಲೀಕತ್ವದ ವಿವಾದಗಳು ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸರ್ಕಾರದ ಆಸ್ತಿಯನ್ನು ಮೊದಲು ಹದ್ದುಬಸ್ತಿ ಮಾಡಿಕೊಂಡು ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು.
 ಎನ್.ಟಿ.ರವಿಕುಮಾರ್ ಸದಸ್ಯರು, ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ

ರಾಜ್ಯದೆಲ್ಲಡೆ ಇದೆ ಸಮಸ್ಯೆ 

ಶಾಲೆಗೆ ಕೊಟ್ಟಿರುವ ಭೂದಾನ ಆಸ್ತಿಯದ್ದೇ ಸಮಸ್ಯೆ. ಇವುಗಳು ನೋಂದಣಿಯಾಗಿಲ್ಲ. ಸೂಕ್ತ ದಾಖಲೆಗಳೂ ಇಲ್ಲ. ಈ ರೀತಿಯ ಸಮಸ್ಯೆ ರಾಜ್ಯದ ಎಲ್ಲೆಡೆ ಇದೆ. ಆದ್ದರಿಂದ ರಾಜ್ಯಕ್ಕೆ ಅನ್ವಯವಾಗುವಂತೆ ರಾಜ್ಯ ಸರ್ಕಾರವು ಸ್ಪಷ್ಟ ನೀತಿಯನ್ನು ಜಾರಿಗೆ ತರಬೇಕು. ಆಗಲೇ ಈ ಸಮಸ್ಯೆ ಪರಿಹಾರ ಸಿಗಲು ಸಾಧ್ಯ.
 ಎ.ವಿ.ಕಾರ್ತಿಕ್, ಸ್ವಯಂಉದ್ಯೋಗಿ