ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿದರು. ವಿಠಲ್ ನಾಣಾಚ್ಚಿ, ಜಯಪ್ಪ, ಪ್ರಕಾಶ್, ಲಕ್ಷ್ಮೀ ಇತರರಿದ್ದರು. 
ಮೈಸೂರು

ಎಸ್‌ಟಿ ಮೀಸಲಾತಿ ಶೇ.7ಕ್ಕೆ ಏರಿಸಲು ಸರ್ಕಾರ ಸ್ಪಂದನೆ

ಹುಣಸೂರು: ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೇರಿಸಲು ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿರುವುದು ಸ್ವಾಗತಾರ್ಹ. ಈ ಪೈಕಿ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಶೇ.3ರ ಪ್ರಮಾಣದ ಒಳಮೀಸಲಾತಿಯನ್ನು ಸಂಪೂರ್ಣವಾಗಿ ಮೀಸಲಿಡಬೇಕೆಂದು ಆದಿವಾಸಿ ಬುಡಕಟ್ಟು ಮುಖಂಡರು ಒತ್ತಾಯಿಸಿದರು.
ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೇರಿಸಲು ಒತ್ತಾಯಿಸಿದ್ದು, ಈ ಕುರಿತು ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಮನವರಿಕೆ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಶೇ.7ರಷ್ಟು ಮೀಸಲು ಜಾರಿಯಾದಲ್ಲಿ ಈ ಪೈಕಿ ಶೇ.3 ಮೀಸಲು ಪೂರ್ಣವಾಗಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಮೀಸಲಿರಿಸಿ, ಮಿಕ್ಕ ಶೇ.4ರ ಪ್ರಮಾಣವನ್ನು ಇತರರಿಗೆ ನೀಡುವುದು ಸೂಕ್ತ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುವುದು. ಅಲ್ಲದೇ ಹೈಕೋರ್ಟ್ ಆದೇಶದಂತೆ 3418 ಕಾಡಿಂದ ಪುನರ್ವಸತಿ ನೀಡದೇ ಹೊರಹಾಕಿರುವ ಆದಿವಾಸಿಗಳಿಗೆ ಪುನರ್ವಸತಿ ಕಾರ್ಯ ಕೈಗೊಳ್ಳಲು ಆಗ್ರಹಿಸಲಾಗುವುದು ಎಂದರು.
ಬೆಟ್ಟಕುರುಬ ಪಾರಂಪರಿಕ ಸಂಘದ ಮುಖಂಡ ವಿಠಲ್ ನಾಣಾಚ್ಚಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಅಧಿಕಾರಾವಧಿಯಲ್ಲಿ ಶೇ.7ಕ್ಕೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ. ಈಗಾಗಲೇ 15 ವಿಧಾನಸಭಾ ಎಸ್‌ಟಿ ಕ್ಷೇತ್ರಗಳು ವಾಲ್ಮೀಕಿ ಸಮುದಾಯಕ್ಕೆ ನೀಡಲಾಗುತ್ತಿದೆ. ಈ ಪೈಕಿ ಕನಿಷ್ಠ 4 ಕ್ಷೇತ್ರಗಳನ್ನು ಆದಿವಾಸಿಗಳು ವಾಸಿಸುವ ಪ್ರದೇಶಗಳಿಗೆ ವರ್ಗಾಯಿಸಿ ಆದಿವಾಸಿಗಳಿಗೆ ಮೀಸಲಿಡಬೇಕು. ಕೂಡಲೇ ಇಬ್ಬರು ಆದಿವಾಸಿ ಮುಖಂಡರನ್ನು ಎಂಎಲ್‌ಸಿಯಾಗಿ ನಾಮಕರಣ ಮಾಡಿ ಒಬ್ಬರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಜಯಪ್ಪ, ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ, ಡೀಡ್ ಶ್ರೀಕಾಂತ್, ಪ್ರಕಾಶ್ ಇತರರು ಇದ್ದರು.