ಹುಣಸೂರು ತಾಲೂಕು ವೀರನಹೊಸಳ್ಳಿ ವಲಯ ಕೇಂದ್ರದಲ್ಲಿ ಆಯೋಜಿಸಿದ್ದ ಗಜಪಯಣ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಡಾ.ಪುಷ್ಪಾ ಅಮರನಾಥ್ ಇತರರಿದ್ದರು.
ದಸರಾ ಉತ್ಸವ ಕನ್ನಡ ನಾಡಿನ ಪರಂಪರೆ, ವೈಭವ. ಶಕ್ತಿ ಸಾಮರ್ಥ್ಯ ಮತ್ತು ಪ್ರತಿಭೆಗಳು ಅನಾವರಣಗೊಳ್ಳುವ ನಾಡ ಹಬ್ಬವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ವೀರನಹೊಸಳ್ಳಿ ವಲಯ ಕೇಂದ್ರದಲ್ಲಿ 2026ನೇ ಸಾಲಿನ ನಾಡಹಬ್ಬ ದಸರಾ ಉತ್ಸವಕ್ಕೆ ಮುನ್ನುಡಿಯಾಗಿರುವ ಗಜಪಯಣ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದ ನಂತರ ಆಯೋಜಿಸಿದ್ದ ವೇದಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 400 ವರ್ಷಗಳ ಇತಿಹಾಸ ಹೊಂದಿರುವ ದಸರಾ ಕನ್ನಡಿಗರ ಹೆಮ್ಮೆಯ ನಾಡಹಬ್ಬ. ಇದು ಕನ್ನಡಿಗರ ಪರಂಪರೆ, ಸಂಸ್ಕೃತಿ, ವೈಭವದ ಅನಾವರಣಗೊಳ್ಳುವ ವೇದಿಕೆ. ರಾಜ್ಯ ಸರ್ಕಾರ ಈ ಬಾರಿಯೂ ದಸರಾ ಉತ್ಸವವನ್ನು 10 ದಿನಗಳ ಕಾಲ ಅದ್ಧೂರಿಯಾಗಿ ಆಯೋಜಿಸಿದೆ. ದಸರಾ ಉತ್ಸವದಲ್ಲಿ ಈ ಹಿಂದೆ ಡ್ರೋನ್ ಪ್ರದರ್ಶನ, ಏರ್‌ಶೋ ಸೇರಿದಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಈ ಬಾರಿ ದೇಶದ ಸೈನ್ಯ ಶಕ್ತಿಯ ಪ್ರದರ್ಶನ ಮತ್ತು ಕಂಬಳ ಸ್ಪರ್ಧೆಗೆ ಅನುವು ಮಾಡಿಕೊಡುವತ್ತ ಗಮನಹರಿಸಲಾಗಿದೆ ಎಂದು ಹೇಳಿದರು.
ಹುಣಸೂರು ಶಾಸಕರು ತಾಲೂಕಿನ ಹಲವು ಜ್ವಲಂತ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ್ದಾರೆ. ಈ ಪೈಕಿ ಕಾಡಂಚಿನ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆ ಒತ್ತುವರಿ ನೆಪ ಹೇಳಿ ನೋಟಿಸ್ ನೀಡುತ್ತಿರುವುದನ್ನು ಪ್ರಸ್ತಾಪಿಸಿದ್ದು, ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಕಾರ್ಯಕ್ಕೆ ಒತ್ತಾಯಿಸಿದ್ದಾರೆ. ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಗಳ ಉಸ್ತುವಾರಿಗಳು, ಶಾಸಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿಯೂ ಶಾಸಕ ಅನಿಲ್ ಚಿಕ್ಕಮಾದು ವಿಷಯ ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹುಣಸೂರು ತಾಲೂಕಿನ ಲಕ್ಷ್ಮಣತೀರ್ಥ ನದಿ ಕಲುಷಿತಗೊಂಡಿದ್ದು ಇದನ್ನು ತಡೆಯಲು ಅಗತ್ಯ ಯೋಜನೆ ಮತ್ತು ಅನುದಾನಕ್ಕೆ ಶಾಸಕ ಹರೀಶ್‌ಗೌಡ ಕೋರಿದ್ದರು. ಈಗಾಗಲೇ 71 ಕೋಟಿ ರೂ.ವೆಚ್ಚದ ಯೋಜನೆಗಾಗಿ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಒಳಚರಂಡಿ ನೀರು ಹರಿಯದಂತೆ ತ್ಯಾಜ್ಯ ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಮತ್ತು ನಗರಾದ್ಯಂತ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುತ್ತಿದ್ದು ಶೀಘ್ರ ಜಾರಿಗೊಳ್ಳಲಿದೆ ಎಂದರು.
ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಎಚ್.ಡಿ.ಗಣೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎನ್.ರಂಗಸ್ವಾಮಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಅರಣ್ಯಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಪ್ರಾದೇಶಿಕ ಆಯುಕ್ತ ನಿತೇಶ್ ಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಒ ಯುಕೇಶ್‌ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಐ.ಬಿ.ಪ್ರಭುಗೌಡ ಹಾಜರಿದ್ದರು.
ವಸಂತ, ರಾಜುಗೆ ಅರ್ಜುನ ಪ್ರಶಸ್ತಿ
ಈ ಸಾಲಿನ ಅರ್ಜುನ ಪ್ರಶಸ್ತಿಯನ್ನು ಅಭಿಮನ್ಯು ಆನೆ ಮಾವುತ ಜೆ.ಎಸ್.ವಸಂತ ಮತ್ತು ಕಾವಾಡಿ ಜೆ.ಕೆ.ರಾಜುಗೆ ನೀಡಲಾಯಿತು. ಅಂಬಾರಿ ಮೆರವಣಿಗೆಯಲ್ಲಿ ಭಾಗಿಯಾಗಲು ಹೊರಟಿರುವ ಅನೆಗಳಾದ ಮಹೇಂದ್ರ, ಧನಂಜಯ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ, ಕಾವೇರಿ, ರೂಪಾ, ಸುಗ್ರೀವ, ಚೈತ್ರಾ ಆನೆಗಳ ಮಾವುತ ಮತ್ತು ಕಾವಾಡಿಗಳನ್ನು ಗೌರವಿಸಲಾಯಿತು.
ಗಜಪಯಣ ಕಾರ್ಯಕ್ರಮಕ್ಕೆ ಹನಗೋಡು ಹೋಬಳಿ ವ್ಯಾಪ್ತಿಯ ಗಿರಿಜನರು ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು. 5 ಸಾವಿರಕ್ಕೂ ಜನರು ಗಜಪಡೆಗಳನ್ನು ಕಂಡು ಸಂತಸಗೊಂಡರು. ಹುಣಸೂರು, ಎಚ್.ಡಿ.ಕೋಟೆಯಿಂದಲೂ ಜನರು ಆಗಮಿಸಿದ್ದರು. ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಅರಣ್ಯ ಇಲಾಖೆ ವೇದಿಕೆ ಕಾರ್ಯಕ್ರಮದಲ್ಲಿ ಒಂದು ಕಾಡು, ಒಂದು ಸಂಪ್ರದಾಯ ಎಂಬ 10 ನಿಮಿಷಗಳ ಕಿರುಚಿತ್ರವನ್ನು ಪ್ರದರ್ಶಿಸಿತು. ಕಿರುಚಿತ್ರ ಮೈಸೂರು ಸಂಸ್ಥಾನದ ಪರಂಪರೆ ಮತ್ತು ನಾಗರಹೊಳೆಯ ಮಹಾಕಾಯ ಗಜಪಡೆಯ ಸಂಬಂಧದ ಕುರಿತು ತಿಳಿಸಿಕೊಟ್ಟಿತು.
ತಾಲೂಕಿನ ವೀರನಹೊಸಳ್ಳಿ, ನಾಗಪುರ, ಕೊಳವಿಗೆಯ ಗಿರಿಜನ ಆಶ್ರಮಶಾಲೆ, ಗುರುಪುರ ಟಿಬೇಟಿಯನ್ ನಿರಾಶ್ರಿತರ ಕೇಂದ್ರದ ಟಿಬೇಟಿಯನ್ ಶಾಲೆ ಮತ್ತು ನಗರದ ಕಾವೇರಿ ಎಕ್ಸ್‌ಪ್ರೆಸ್ ಡ್ಯಾನ್ಸ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಪ್ರದರ್ಶನ ಎಲ್ಲರ ಮನಸೆಳೆಯಿತು.