ಎಚ್.ಡಿ.ಕೋಟೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ 119ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶ್ರೀನಿವಾಸ್, ಕೊತ್ತೇಗಾಲ ತಿಮ್ಮಯ್ಯ, ಪರಶಿವಮೂರ್ತಿ ಇತರರಿದ್ದರು.
- ಬಾಬೂಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಶಾಸಕರಿಗೆ ತಡೆ
- ಒಳ ಮೀಸಲಾತಿ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಮೇಷ
ಎಚ್.ಡಿ.ಕೋಟೆ: ಒಳ ಮೀಸಲಾತಿ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಹೋರಾಟ ನಡೆಸುತ್ತಿರುವ ಮುಖಂಡರು ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರನ್ನು ತಡೆದ ಪ್ರಸಂಗ ಭಾನುವಾರ ನಡೆಯಿತು.
ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾದಿಗ ಸಮುದಾಯದ ಮುಖಂಡರು ಒಳ ಮೀಸಲಾತಿ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿದರು. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರನ್ನು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಮುಖಂಡರು ಮನವಿ ಮಾಡಿದರು. ಮನವಿಗೆ ಸ್ಪಂದಿಸದ ಶಾಸಕ ಅನಿಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನಷ್ಟೇ ಮಾಡಿ ಕಾರ್ಯಕ್ರಮದಿಂದ ವಾಪಸ್ ಹೊರನಡೆದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಭಾನುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಬಾಬು ಜಗಜೀವನರಾಮ್ ವಿಚಾರ ವೇದಿಕೆ ಅಧ್ಯಕ್ಷ ಕೊತ್ತೇಗಾಲ ತಿಮ್ಮಯ್ಯ, ಮಾಜಿ ಅಧ್ಯಕ್ಷರಾದ ಪರಶಿವಮೂರ್ತಿ, ಪಿ.ನಾಗರಾಜು, ಮುಖಂಡರಾದ ಶಿವಯ್ಯ, ಚಲುವರಾಜು, ಕಾಳಪ್ಪಾಜಿ, ರವೀಶ್, ಸೋಮು, ಉಡ ನಾಗರಾಜು ಇದ್ದರು.