ಕಂಬಳ  
ಮೈಸೂರು

ಕಂಬಳ ಹಿಂಪಡೆಯಲು ಸರ್ಕಾರಕ್ಕೆ ವಾರದ ಗಡುವು

ಪ್ರಮುಖ ಮುಖ್ಯಾಂಶಗಳು

  • ಪರಿಸರಕ್ಕಾಗಿ ನಾವು, ರಾಜ್ಯ ರೈತ ಸಂಘ, ದಲಿತ ಸಂಘಟನೆಗಳ ಎಚ್ಚರಿಕೆ
  • ನ್ಯಾಯಾಲಯದಲ್ಲಿ ದಾವೆ ಹೂಡಲು ತೀರ್ಮಾನ
  • ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಮುಂದಾಗಿರುವ ಸರ್ಕಾರದ ಕ್ರಮ ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು. ಜತೆಗೆ ಬೀದಿಗಿಳಿದು ಹೋರಾಟ ಮಾಡುವುದಾಗಿ ‘ಪರಿಸರಕ್ಕಾಗಿ ನಾವು’ ಸಂಘಟನೆ, ರಾಜ್ಯ ರೈತ ಸಂಘ ಮತ್ತು ದಲಿತ ಸಂಘಟನೆಗಳು ಎಚ್ಚರಿಸಿವೆ.
ಕಂಬಳ ಹಿಂಪಡೆಯಲು ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗುವುದು. ಹಂತ ಹಂತವಾಗಿ ಹೋರಾಟ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಸಂಘಟನೆಗಳು ಮುಖಂಡರು ತಿಳಿಸಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ದಸರಾದಲ್ಲಿ ಕಂಬಳ ಆಯೋಜನೆಗೆ ಹಠಬೇಡ. ಕಂಬಳಕ್ಕೆ ಅದರದೇ ಆದ ವೈಶಿಷ್ಟ್ಯ, ಧಾರ್ಮಿಕತೆ ಇದೆ. ಮೈಸೂರಲ್ಲಿ ಆಯೋಜನೆಗೆ ತುಳುನಾಡಿನ ಜನರೇ ವಿರೋಧ ಮಾಡುತ್ತಿದ್ದು, ದಸರಾದಲ್ಲಿ ಕಂಬಳ ವಿರೋಧಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೇವಲ ಎರಡು ದಿನಗಳ ಕ್ರೀಡೆಗೆ 400 ಕೋಣ ಕರೆತರಲಾಗುತ್ತಿದ್ದು, ಪ್ರತಿ ಕೋಣದ ಜವಾಬ್ದಾರಿಗೆ 50 ಜನರಂತೆ 20 ಸಾವಿರ ಜನರು ಮೈಸೂರಿಗೆ ಬರಲಿದ್ದಾರೆ. ಕಂಬಳಕ್ಕಾಗಿ 27 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಕಡಿಯಲಾಗುತ್ತದೆ. ನೀರಿನ ತೀವ್ರ ಅಭಾವವಿರುವಾಗ ಲಕ್ಷಾಂತರ ಲೀಟರ್ ನೀರು ಪೋಲು ಮಾಡುವುದು ವಿವೇಕದ ನಡೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಂಬಳ ವಿರೋಧಿಸುತ್ತಿಲ್ಲ, ಬಲವಂತವಾಗಿ ಹೇರುವುದಕ್ಕೆ ವಿರೋಧವಿದೆ. ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ, ಓಟದ ಕೋಣಗಳೂ ಇಲ್ಲ. ದಸರಾದಲ್ಲಿ ಸ್ಥಳೀಯ ಕ್ರೀಡೆ, ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು. ಸ್ಥಳೀಯ ಜನರ ಭಾವನೆಯನ್ನು ಗೌರವಿಸಿ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಜನರು ವಿರೋಧಿಸುವುದನ್ನೇ ಸರ್ಕಾರ ಹಠಕ್ಕೆ ಬಿದ್ದಂತೆ ಜಾರಿಗೆ ತರುತ್ತದೆ. ಸರ್ಕಾರ ವಾರದೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಬೀದಿಗಿಳಿದು ಅಹಿಂಸಾತ್ಮಕ ಹೋರಾಟದೊಂದಿಗೆ ಪ್ರತಿರೋಧ ಒಡ್ಡಲಾಗುವುದು ಎಂದು ಎಚ್ಚರಿಸಿದರು.
ಪಾರಂಪರಿಕ ತಜ್ಞ ಪ್ರೊ.ಎನ್.ಎಸ್.ರಂಗರಾಜು ಮಾತನಾಡಿ, ಪ್ರವಾಸೋದ್ಯಮದ ಹೆಸರಿನಲ್ಲಿ ಜನಪದ ಕ್ರೀಡೆ ತುರುಕುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಕ್ರೀಡೆ ಆಯೋಜಿಸಿ ದುಂದುವೆಚ್ಚ ಮಾಡುವುದು ಸರಿಯಲ್ಲ. ಮಂಗಳೂರು, ಮೂಡಬಿದರೆ ದಸರಾಗಳಲ್ಲಿ ಕಂಬಳ ಆಯೋಜಿಸಬೇಕು ಎಂದು ಹೇಳಿದರು.
ಪರಿಸರ ಹೋರಾಟಗಾರ್ತಿ ಭಾನು ಮೋಹನ್ ಮಾತನಾಡಿ, ದಸರಾದಲ್ಲಿ ಕಂಬಳ ಆಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಮಲೆನಾಡಿನ ಕ್ರೀಡೆಯನ್ನು ಮೈಸೂರಲ್ಲಿ ಆಯೋಜನೆ ಮಾಡುತ್ತಿರುವುದು ಜನ ವಿರೋಧಿ ಕ್ರಮ. ಸಾಂಸ್ಕೃತಿಕ ಹಬ್ಬವನ್ನು ಸಂಭ್ರಮಾಚರಣೆ ಹೆಸರಿನಲ್ಲಿ ವ್ಯಾಪಾರೀಕರಣ ಮಾಡುತ್ತಿರುವುದು ಖಂಡನೀಯ. ಈ ದುಬಾರಿ ಕಾರ್ಯಕ್ರಮವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಮ.ಗು.ಸದಾನಂದಯ್ಯ ಮಾತನಾಡಿ, ಮೈಸೂರಲ್ಲಿ ಕಂಬಳ ಆಯೋಜಿಸುವುದು ಪ್ರಕೃತಿ ಮತ್ತು ಸಂಸ್ಕೃತಿಗೆ ವಿರುದ್ಧವಾದದ್ದು. ಕಂಬಳ ಆಯೋಜನೆ ಸರಿಯಲ್ಲ ಎಂದರು.
ಮುಖಂಡರಾದ ಮನ್ಸೂರ್ ಅಹಮದ್, ಹೊರೆಯಾಲ ದೊರೆಸ್ವಾಮಿ, ಸಿಂಧುವಳ್ಳಿ ಅಕ್ಬರ್, ಶಂಭುಲಿಂಗಸ್ವಾಮಿ, ಮೋಹನ್, ಗಣೇಶ್ ಇದ್ದರು.