ಆರೋಗ್ಯ ಸಚಿವ ಯು.ಟಿ.ಖಾದರ್  
ಮೈಸೂರು

ತನ್ವೀರ್ ಸೇಠ್‌ಗೆ ಬರಲಿದೆ ಒಳ್ಳೆಯ ಕಾಲ: ಸಚಿವ ಯು.ಟಿ.ಖಾದರ್ ವಿಶ್ವಾಸ

ಪ್ರಮುಖ ಮುಖ್ಯಾಂಶಗಳು

  • ತನ್ವೀರ್ ಸೇಠ್ ಅವರು ಹಿರಿಯ ರಾಜಕಾರಣಿ, ಸಚಿವರಾಗುವ ಅರ್ಹತೆ ಇದೆ
  • ಬಸವರಾಜ ಹೊರಟ್ಟಿ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ರಾಜಕಾರಣ

ಮೈಸೂರು: 

ಮುಂದಿನ ದಿನಗಳಲ್ಲಿ ಶಾಸಕ ತನ್ವೀರ್ ಸೇಠ್ ಅವರಿಗೂ ಒಳ್ಳೆಯ ಕಾಲ ಬರುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಿದ ವಿಚಾರ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಲ್ಪಸಂಖ್ಯಾತ ಸಮುದಾಯಕ್ಕೆ ನಾಲ್ಕು ಸ್ಥಾನ ಕೊಟ್ಟಿದ್ದಾರೆ. ತನ್ವೀರ್ ಸೇಠ್ ಅವರು ಹಿರಿಯ ರಾಜಕಾರಣಿ, ಸಚಿವರಾಗುವ ಅರ್ಹತೆ ಇದೆ ಎಂದರು.
ಮೈಸೂರಿಗರು ತ್ಯಾಗಕ್ಕೆ ಎತ್ತಿದ ಕೈ. ಇದೇ ಊರಿನ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಸಿಎಂ ಸ್ಥಾನ ಬಿಟ್ಟು ಕೊಡಿ ಎಂದ ಒಂದೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಪ್ರಧಾನಿ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದಾರೆ. ಮುಂದೆ ತನ್ವೀರ್ ಸೇಠ್ ಅವರಿಗೂ ಒಳ್ಳೆಯ ಕಾಲ ಬರುತ್ತದೆ ಎಂದರು.
ಖಾತೆ ಹಂಚಿಕೆಯಲ್ಲಿ ಮುಖ್ಯಮಂತ್ರಿಯದ್ದೇ ಪರಮಾಧಿಕಾರ. ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಿ ಎಲ್ಲರಿಗೂ ಸಮರ್ಪಕವಾಗಿ ಖಾತೆ ಹಂಚಿಕೆ ಮಾಡುತ್ತಾರೆ. ಎಲ್ಲ ಖಾತೆಗಳೂ ಪವರ್ ಫುಲ್ ಎಂದು ಚುಟುಕಾಗಿ ಉತ್ತರಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕುಟುಕಿದರು.
ಮೇಲ್ಮನೆಯಲ್ಲಿ ಬಿಜೆಪಿ ಅವರಿಗೆ ಬಹುಮತ ಇಲ್ಲ. 3 ವರ್ಷ ಒಂದು ವೋಟಿಗಾಗಿ ಬದಲಾವಣೆ ಏಕೆ ಎಂದು ಸಭಾಪತಿ ಬದಲಾವಣೆ ಮಾಡಿರಲಿಲ್ಲ. 
ಬಸವರಾಜ ಹೊರಟ್ಟಿ ಅವರೇ ಮುಖ್ಯಮಂತ್ರಿ ಬಳಿ ತೆರಳಿ ರಾಜೀನಾಮೆ ಪತ್ರ ಬರೆದು ಕೊಟ್ಟಿದ್ದಾರೆ. ಸಭಾಪತಿ ಎನ್ನುವ ಸಂವಿಧಾನಿಕ ಹುದ್ದೆಯನ್ನು ಮುಂದೆ ಇಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡಬಾರದಾಗಿತ್ತು. ಅದು ರಾಜ್ಯಕ್ಕೆ ಕಪ್ಪು ಚುಕ್ಕೆ. ಬಿಜೆಪಿ ಅವರು ಯಾವುದನ್ನೂ ಮಾತನಾಡಬೇಕು ಅದನ್ನು ಮಾತನಾಡುವುದಿಲ್ಲ. ಸಭಾಪತಿ ಎನ್ನುವ ಗೌರವಯುತ ಹುದ್ದೆಗೆ ಬಿಜೆಪಿ ಅವರು ಧಕ್ಕೆ ತರುತ್ತಿದ್ದಾರೆ ಎಂದು ದೂರಿದರು.

ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಅಧಿಕಾರಿಗಳು ದಾಳಿಯನ್ನು ಸಮರ್ಥಿಸಿಕೊಂಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಜನರು ಅವರು ಕೇಳಿದಷ್ಟು ಹಣ ಕೊಡುತ್ತಾರೆ. ಆದರೂ ಹೋಟೆಲ್ ಮಾಲೀಕರು ಗ್ರಾಹಕರಿಗೆ ಮೋಸ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋಟೆಲ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ನಮ್ಮ ಉದ್ದೇಶ ಅಲ್ಲ. ಹೋಟೆಲ್ ಮಾಲೀಕರಿಗೆ ಅದರ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದು, ಹೋಟೆಲ್‌ಗೆ ಹೋಗುವ ಜನರಿಗೂ ಎಲ್ಲವೂ ಸರಿ ಇಲ್ಲ ಅಂತ ಗೊತ್ತಾಗಬೇಕು ಎಂದರು.
ನಾನು ಆರೋಗ್ಯ ಸಚಿವ, ರೋಗ ಬಂದರೆ ಮಾತ್ರ ಮದ್ದು ಕೊಡುತ್ತೀನಿ. ರೋಗ ಬಾರದೇ ಇರಬೇಕು ಅಂದರೆ ಊಟ ಚೆನ್ನಾಗಿ ಇರಬೇಕು. ಅನೇಕ ಹೋಟೆಲ್‌ಗಳನ್ನು ಬಂದ್ ಮಾಡಿದ್ದೇವೆ. ಕಾನೂನು ಕ್ರಮಕ್ಕಿಂತ ಅದನ್ನು ಸರಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಜನರಿಗೆ ನಿಮ್ಮ ಹೋಟೆಲ್ ಕಿಚನ್‌ಗಳನ್ನು ತೋರಿಸುವ ಕೆಲಸವನ್ನು ಮಾಡಲಿ ಎಂದು ಹೇಳಿದರು.