ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಎಂ.ಎಸ್.ಕೆ.ನರಹರಿ ಬಾಬು, ಎಂ.ಡಿ. ಗೋಪಿನಾಥ್, ಎಸ್.ಬಾಲಾಜಿ, ವೈ.ಆರ್.ರಮೇಶ್, ಕೆ.ಎನ್. ಫಣೀಶ್, ಸಿ.ಎನ್.ನಾಗರಾಜು ಇದ್ದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಪರಂಪರೆ ಮತ್ತು ಮನ್ನಣೆ ಇದೆ. ನಮ್ಮ ಸಂಸ್ಥೆಯ ಶಿಕ್ಷಕರ ನಿರಂತರ ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂದು ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ.ಡಿ.ಗೋಪಿನಾಥ್ ಅಭಿಪ್ರಾಯಪಟ್ಟರು.
ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶನಿವಾರ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಇದರಲ್ಲಿ ವಿದ್ಯಾರ್ಥಿಗಳ ಪಾತ್ರವೂ ಅಪಾರವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯ ಪೈಪೋಟಿಯ ನಡುವೆಯು ಸದ್ವಿದ್ಯಾ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಎಸ್.ಬಾಲಾಜಿ ಮಾತನಾಡಿ, ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಪಿಯು ಶಿಕ್ಷಣ ಜೀವನದ ಅತ್ಯಂತ ಪ್ರಮುಖ ಘಟ್ಟ, ಮುಂದಿನ ಭವಿಷ್ಯದಲ್ಲಿ ನೀವು ಯಶಸ್ಸು ಗಳಿಸುವಂತಾಗಲಿ ಎಂದು ಆಶಿಸಿದರು.
ಸಂಸ್ಥೆಯ ಗೌರವ ಅಧ್ಯಕ್ಷ ಪ್ರೊ.ಎಂ.ಎಸ್.ಕೆ. ನರಹರಿ ಬಾಬು ಮಾತನಾಡಿ, ಪಿಯು ಜೀವನದ ಪ್ರಮುಖ ಹಂತ ಹಾಗಾಗಿ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿ. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲ ವೈ.ಆರ್.ರಮೇಶ್ ಮಾತನಾಡಿದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ರಾಜ್ಯಕ್ಕೆ ರಾಂಕ್ ಪಡೆದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕೆ.ಚಿತ್ರಸ್ಫೂರ್ತಿ(ರಾಜ್ಯಕ್ಕೆ ನಾಲ್ಕನೇ ಸ್ಥಾನ), ಎಸ್.ಸಂಜನಾ, ಭಕ್ತಿ ಎ.ಜೈನ್, ಆರ್.ಮಾನ್ಯಾ, ಎಂ.ಎನ್. ರಿಷಿತ್ ಗೌಡ, ರಿಯಾ ಪಿ.ಜೈನ್, ಎಂ.ವಿದ್ಯಾ ಅವರಿಗೆ ಬಳ್ಳಿ ಫಲಕ ಮತ್ತು ಪದಕ ನೀಡಿ ಪುರಸ್ಕಾರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಸಹ ಕಾರ್ಯದರ್ಶಿ ಕೆ.ಎನ್.ಫಣೀಶ್ ಹಾಗೂ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಸಿ.ಎನ್.ನಾಗರಾಜು ಇದ್ದರು.