ಮೈಸೂರು ಮಹಾನಗರ ಪಾಲಿಕೆ  
ಮೈಸೂರು

ಪಾಲಿಕೆ ಆಸ್ತಿ ತೆರಿಗೆ ವಸೂಲಾತಿ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಪ್ರಮುಖ ಮುಖ್ಯಾಂಶಗಳು

  • ಮೊದಲ ದಿನವೇ 1,69,45,352 ರೂ. ತೆರಿಗೆ ಪಾವತಿ
  • ಶೇ.5ರಷ್ಟು ರಿಯಾಯಿತಿ ಘೋಷಣೆ
ಮೈಸೂರು: ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ವಸೂಲಾತಿಗೆ ಚುರುಕುಗೊಳಿಸಿದ್ದು, ಈಗಾಗಲೇ ಶುರುವಾಗಿರುವ ಶೇ.5ರಷ್ಟು ರಿಯಾಯಿತಿ ನೀಡುವ ತೆರಿಗೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. 
ಮೊದಲ ದಿನವೇ 1.69 ಕೋಟಿ ರೂ. ಆಸ್ತಿ ತೆರಿಗೆಯನ್ನೂ ವಸೂಲಾತಿ ಮಾಡಿದೆ. ಈ ಅಭಿಯಾನ ಏ.1ರಿಂದ 30ರವರೆಗೆ ಚಾಲ್ತಿಯಲ್ಲಿ ಇರಲಿದೆ.
 2026-27ನೇ ಸಾಲಿನ ಆರ್ಥಿಕ ವರ್ಷ ಇದೀಗ ಶುರುವಾಗಿದೆ. ಈ ಸಲ ಆಸ್ತಿ ಮೌಲ್ಯಕ್ಕೆ ಅನುಗುಣವಾಗಿ ಶೇ.3ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಪಾಲಿಕೆ 265 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಮೂರು ಹಂತದಲ್ಲಿ ತೆರಿಗೆ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ. ತೆರಿಗೆಯಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲು ಉದ್ದೇಶಿಸಿರುವ ಮಹಾನಗರ ಪಾಲಿಕೆ, ತೆರಿಗೆದಾರರನ್ನು ಅನುಕೂಲವಾಗುವಂತೆ ಹೆಚ್ಚುವರಿ ಕೌಂಟರ್ ತೆರೆದಿದೆ.
ಪಾಲಿಕೆಯ ಎಲ್ಲ 9 ವಲಯ ಕಚೇರಿಗಳಲ್ಲೂ ಆಸ್ತಿ ತೆರಿಗೆ ಸ್ವೀಕರಿಸಲು ಹೆಚ್ಚುವರಿಯಾಗಿ ತಲಾ ಒಂದೊಂದು ಕೌಂಟರ್ ಸೇರಿದಂತೆ ವಲಯ ಕಚೇರಿಗಳಲ್ಲಿ ಎರಡು ಕೌಂಟರ್‌ನಲ್ಲಿ ಆಸ್ತಿ ತೆರಿಗೆ ಸ್ವೀಕರಿಸಲಾಗುತ್ತಿದೆ. ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಲು ತೆರಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿದ್ದು, ವಲಯ ಕಚೇರಿಗಳ ಬಳಿ ತೆರಿಗೆ ಪಾವತಿಸಲು ಬರುವವರಿಗೆ ಮೂಲಸೌಲಭ್ಯ ಒದಗಿಸಲಾಗಿದೆ. ಬೇಸಿಗೆ ತಾಪದಿಂದ ರಕ್ಷಣೆ ನೀಡಲು ಪೆಂಡಾಲ್ ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 2,10,770 ಅಧಿಕೃತ ಖಾತೆದಾರರು, 20,966 ಅನಧಿಕೃತ ಖಾತೆದಾರರು ಸೇರಿದಂತೆ 2,31,736 ಜನ ಆಸ್ತಿ ತೆರಿಗೆದಾರರಿದ್ದಾರೆ. ಕಳೆದ ವರ್ಷ 240 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದ ಪಾಲಿಕೆ ವರ್ಷಾಂತ್ಯದ ವೇಳೆಗೆ 242 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ್ದು, ನಿಗದಿತ ಗುರಿಗಿಂತ ಎರಡು ಕೋಟಿ ರೂ. ಹೆಚ್ಚಾಗಿದೆ.
ಈ ಸಾಲಿನಲ್ಲಿ 265 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ತೆರಿಗೆ ಸಂಗ್ರಹ ಅಭಿಯಾನದ ಮೊದಲ ದಿನವಾದ ಏ.1ರಂದು ಬ್ಯಾಂಕ್ ರಜೆಯಿದ್ದ ಕಾರಣ ಕೇವಲ ಆನ್‌ಲೈನ್ ಮೂಲಕ ತೆರಿಗೆ ಸಂಗ್ರಹಿಸಲಾಗಿದ್ದು, 5843 ತೆರಿಗೆದಾರರು ಪಾಲಿಕೆಗೆ 1,69,45,352 ರೂ. ತೆರಿಗೆ ಪಾವತಿಸಿದ್ದಾರೆ.
ಆಸ್ತಿ ತೆರಿಗೆ ಮೊತ್ತದಲ್ಲಿ ಶೇ.5ರಷ್ಟು ರಿಯಾಯಿತಿ ಸೌಲಭ್ಯಕ್ಕೆ ಏ.30ಕ್ಕೆ ಕೊನೆಯಾಗಲಿದೆ. ನಂತರ ಮೇ ತಿಂಗಳಿಂದ ಜೂನ್‌ವರೆಗೆ ಎರಡು ತಿಂಗಳು ನಿಗದಿತ ಪ್ರಮಾಣದ ತೆರಿಗೆ ಪಾವತಿಸಬೇಕಾಗುತ್ತದೆ. ಈ ಅವಧಿಯಲ್ಲೂ ತೆರಿಗೆ ಪಾವತಿಸದೆ ಇದ್ದರೆ ದಂಡಾಸ್ತ್ರ ಪ್ರಯೋಗಿಸಲಿದೆ. ಜುಲೈನಿಂದ ಪ್ರತಿ ತಿಂಗಳಿಗೂ ಶೇ.2ರಷ್ಟು ದಂಡ ವಿಧಿಸಿ ತೆರಿಗೆ ವಸೂಲು ಮಾಡುವುದಕ್ಕೆ ಪಾಲಿಕೆ ಕ್ರಮ ಕೈಗೊಂಡಿದೆ.
ಪಾಲಿಕೆ ಎಂದಿನಂತೆ ಈ ವರ್ಷವೂ ಆಸ್ತಿ ತೆರಿಗೆಯಲ್ಲಿ ಶೇ.5ರಷ್ಟು ರಿಯಾಯಿತಿ ನೀಡುವ ಅಭಿಯಾನವನ್ನು ಒಂದು ತಿಂಗಳು ನಡೆಸುತ್ತಿದೆ. ಏ.30ರವರೆಗೂ ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಎಲ್ಲ ವಲಯ ಕಚೇರಿಗಳಲ್ಲೂ ಹೆಚ್ಚುವರಿ ಕೌಂಟರ್ ತೆರೆದು, ತೆರಿಗೆ ಸಂಗ್ರಹಿಸಲಾಗುತ್ತಿದೆ. 
ಮೇ ಮತ್ತು ಜೂನ್‌ನಲ್ಲಿ ಯಾವುದೇ ರಿಯಾಯಿತಿ ಇಲ್ಲದೆ ಪೂರ್ಣ ಪ್ರಮಾಣದ ತೆರಿಗೆ ಪಾವತಿಸಬೇಕು. ಸಾರ್ವಜನಿಕರು ತೆರಿಗೆ ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಬೇಕು. ರಜಾ ದಿನ ಹೊರತುಪಡಿಸಿ ಸಾರ್ವಜನಿಕರು ನಿತ್ಯ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ತೆರಿಗೆ ಪಾವತಿಸಬಹುದು ಎಂದು ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಸೋಮಶೇಖರ್ ಜಿಗಣಿ ತಿಳಿಸಿದ್ದಾರೆ.