ನಗರಪಾಲಿಕೆ ಭಾನುವಾರ ಏರ್ಪಡಿಸಿದ್ದ ಸ್ವಚ್ಛತಾ ಓಟದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು.
- ನಗರಪಾಲಿಕೆ ಆಯೋಜನೆ ನಾಲ್ಕು ಸಾವಿರಕ್ಕೂ ಹೆಚ್ಚು ಓಟಗಾರರು ಭಾಗಿ
ಮೈಸೂರು: ಸ್ವಚ್ಛ ಸರ್ವೇಕ್ಷಣ ಅಭಿಯಾನ ಹಿನ್ನೆಲೆಯಲ್ಲಿ ‘ಓಡೋಣ ಮೈಸೂರಿಗಾಗಿ ಒಂದಾಗೋಣ ಸ್ವಚ್ಛತೆಗಾಗಿ’ ಶೀರ್ಷಿಕೆಯಡಿ ನಗರಪಾಲಿಕೆ ಭಾನುವಾರ ಏರ್ಪಡಿಸಿದ್ದ ಸ್ವಚ್ಛತಾ ಓಟ(ಮ್ಯಾರಥಾನ್)ಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಓಡಿ ಸ್ವಚ್ಛತೆಯ ಸಂದೇಶ ಸಾರಿದರು. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗದಿಂದ ಆರಂಭಗೊಂಡ ಓಟವು ಕೆ.ಆರ್. ವೃತ್ತ ವಾರ್ಗವಾಗಿ ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಮೂಲಕ ಸಾಗಿ, ರಾಮಸ್ವಾಮಿ ವೃತ್ತದಿಂದ ಚಾಮರಾಜ ಡಬಲ್ ರೋಡ್ ಮಾರ್ಗವಾಗಿ ಬಸವೇಶ್ವರ ವೃತ್ತ ಹಾದು, ಅರಮನೆ ಎದುರಿನ ರಸ್ತೆ ಮೂಲಕ ಹಾಡಿರ್ಂಜ್ ವೃತ್ತದ ಮೂಲಕ ರಾಜ ಮಾರ್ಗದಲ್ಲಿ ಸಾಗಿ ದೊಡ್ಡ ಗಡಿಯಾರ ಸುತ್ತುವರಿದು ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಎದುರು ಸಂಪನ್ನಗೊಂಡಿತು. ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಹಮ್ಮಿಕೊಂಡಿದ್ದ 3, 5 ಮತ್ತು 10 ಕಿ.ಮೀ ಮ್ಯಾರಥಾನ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.
ಮ್ಯಾರಥಾನ್‌ನಲ್ಲಿ ವಿಜೇತರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ. ಹಾಗೂ ತೃತೀಯ 3 ಸಾವಿರ ರೂ. ನಗದು ಬಹುಮಾನ ಹಾಗೂ ಪದಕ, ಪ್ರಮಾಣಪತ್ರ ನೀಡಲಾಯಿತು. ಅಲ್ಲದೇ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಪ್ರೋತ್ಸಾಹಿಸಲಾಯಿತು. ಸ್ವಚ್ಛತಾ ಓಟದಲ್ಲಿ ಭಾಗವಹಿಸಿದವರಿಂದ ಸಹಿ ಸಂಗ್ರಹಿಸಲಾಯಿತು.
ಓಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದರೆ, ಶಿಲ್ಪಿ ಅರುಣ್ ಯೋಗಿರಾಜ್ 10 ಕಿ.ಮೀ. ಮ್ಯಾರಥಾನ್ ಪೂರ್ಣಗೊಳಿಸಿ ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಮ್ಮ ನಮ್ಮ ಕೆಲಸವನ್ನು ನಾವೇ ಮಾಡಬೇಕು. ಸಾಮಾಜಿಕ ಜವಾಬ್ದಾರಿಯಿಂದ ಸ್ವಚ್ಛ ಮೈಸೂರು ಆಶಯವನ್ನು ಸಾಕಾರಗೊಳಿಸಬೇಕು. ನಾವು ಪರಿಸರ ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತೆ. ಸ್ವಚ್ಛತೆ ಎಂದರೆ ಆನಂದ, ಮೈಸೂರು ಸ್ವರ್ಗ ಸ್ಥಳವಿದ್ದಂತೆ ಅದರ ಪಾರಂಪರಿಕತೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.
ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಷ್ಣುವರ್ಧನ್, ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಉಪ ಆಯುಕ್ತ ಸೋಮಶೇಖರ್ ಜಿಗಣಿ, ಡಿಸಿಪಿ ಸುಂದರ್‌ರಾಜ್, ಕೆಪಿಎ ಉಪ ನಿರ್ದೇಶಕ ಚನ್ನಬಸವಣ್ಣ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕರ್ನಾಟಕ ಬ್ಯಾಂಕ್ ಅಧೀಕ್ಷಕ ಅರುಣ್, ಜಿಎಸ್ ಎಸ್ ಮುಖ್ಯಸ್ಥ ಶ್ರೀಹರಿ, ಮಾಜಿ ಸೈನಿಕ ದಿವಾಕರ್ ಇದ್ದರು.
ಫಲಿತಾಂಶ:
ಪುರುಷರ ವಿಭಾಗ: 10 ಕಿಮೀ ಓಟದ ವಿಶೇಷ ಸಾಮರ್ಥ್ಯವುಳ್ಳವರ ಯುವಕರ ವಿಭಾಗದಲ್ಲಿ ಕೆ.ಬಸವರಾಜು(ಪ್ರ), ಯುವರಾಜ್(ದ್ವಿ), ಅಜಿತ್(ತೃ), 18 ಮೇಲ್ಪಟ್ಟ ವಿಭಾಗದ 3 ಕಿ.ಮೀ. ಓಟದಲ್ಲಿ ಪ್ರವೀಣ್ (ಪ್ರ), ಮೊಹಮ್ಮದ್ ಉವಾನ್ (ದ್ವಿ), ನಂದನ್ (ತೃ)., 18 ಮೇಲ್ಪಟ್ಟ ವಿಭಾಗದ 5 ಕಿ.ಮೀ. ಓಟದಲ್ಲಿ ಪ್ರಥಮ್(ಪ್ರ), ಪುರುಷೋತ್ತಮ (ದ್ವಿ), ನಿತೀನ್(ತೃ), 18 ವರ್ಷದೊಳಗಿನ ವಿಭಾಗ ಓಟದಲ್ಲಿ ಚಿರಂಜೀವಿ(ಪ್ರ), ವರುಣ್ (ದ್ವಿ), ಶ್ರೇಯಸ್(ತೃ) ಬಹುಮಾನ ಪಡೆದರು. 41 ವರ್ಷ ಮೇಲ್ಪಟ್ಟ ಭಾಗದಲ್ಲಿ ಗಣೇಶ್(ಪ್ರ), ರಘುನಂದನ್(ದ್ವಿ), ಯೋಗೇಶ್ ಸಾಗರ್(ತೃ), 18-40 ವರ್ಷದ ವಿಭಾಗದ 10 ಕಿ.ಮೀ. ಓಟದಲ್ಲಿ ಗೋಪಿ ಸರೋಜ್(ಪ್ರ), ಮಹೇಶ್(ದ್ವಿ), ಗಣಪತಿ (ತೃ), 41 ಮೇಲ್ಪಟ್ಟ ವಿಭಾಗದಲ್ಲಿ ದಶರಥ(ಪ್ರ), ಗೋಪಿಕೃಷ್ಣ (ದ್ವಿ), ಮಹದೇವಸ್ವಾಮಿ(ತೃ) ಬಹುಮಾನ ಪಡೆದರು.
ಮಹಿಳೆಯರ ವಿಭಾಗ: 18-40 ವರ್ಷದ ವಿಭಾಗದ 5 ಕಿ.ಮೀ ಓಟದಲ್ಲಿ ಉಷಾ (ಪ್ರ), ಅಂತಾರಾಷ್ಟ್ರೀಯ ಖೋಖೋ ಪಟು ಚೈತ್ರಾ (ದ್ವಿ), ವಿದ್ಯಾ(ತೃ), 41 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಶಾಂತಕುವಾರಿ(ಪ್ರ), ಎಂ.ಎಸ್.ಸರೋಜಾ(ದ್ವಿ), ವಾಲಿನಿ(ತೃ), 18-40 ವರ್ಷದ ಮಹಿಳೆಯರ ವಿಭಾಗದ 10 ಕಿ.ಮೀ ಓಟದಲ್ಲಿ ವಿಜಯಲಕ್ಷ್ಮೀ (ಪ್ರ), ಹರ್ಷಿತಾ(ದ್ವಿ), ಜಯಶ್ರೀ(ತೃ), 41 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಉಮಾ (ಪ್ರ), ಮಾನಸಾ(ದ್ವಿ), ರೂಪಾ ರಮೇಶ್ ತಳವಾರ(ತೃ) ಬಹುಮಾನ ಪಡೆದರು.