ಮೈಸೂರು ನಗರದಲ್ಲಿ ಶನಿವಾರ ಉತ್ತಮ ಮಳೆ ಸುರಿಯಿತು.
ಮೈಸೂರು: ಬಿಸಿಲಿನ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ನಗರದ ಜನತೆಗೆ ಶನಿವಾರ ಸುರಿದ ಮಳೆಯು ತಂಪೆರೆಯಿತು. ಸಂಜೆ ದಿಢೀರಾಗಿ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ಉತ್ತಮ ಮಳೆ ಸುರಿಯಿತು.
ನಗರದಲ್ಲಿ ಶನಿವಾರ ಕನಿಷ್ಠ 21 ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ನಗರದಲ್ಲಿ ಪ್ರತಿನಿತ್ಯ ತಾಪಮಾನ ಏರಿಕೆಯಾಗುತ್ತಿದೆ. ಕಾವೇರಿದ ವಾತಾವರಣ ದೂರವಾಗಲು ಉತ್ತಮ ಮಳೆಯಾಗಲಿ ಎಂದು ಎಲ್ಲರು ಬಯಸಿದ್ದರು. ಇದಕ್ಕೆ ಪೂರಕವಾಗಿ ನಗರದಲ್ಲಿ ಉತ್ತಮ ಮಳೆ ಸುರಿಯುವ ಮೂಲಕ ನಗರದಲ್ಲಿ ತಣ್ಣನೆಯ ವಾತಾವರಣ ನಿರ್ಮಾಣ ಮಾಡಿತು.
ಹವಾಮಾನ ಇಲಾಖೆ ವರದಿಯ ಪ್ರಕಾರ ನಗರದಲ್ಲಿ ಮಳೆಯಾಗುವ ಮುನ್ಸೂಚನೆ ಇರಲಿಲ್ಲ. ಆದರೆ, ನಗರದಲ್ಲಿ ಸಂಜೆ 4ರ ನಂತರ ದಟ್ಟವಾದ ಮೋಡ ಕವಿಯಲು ಪ್ರಾರಂಭವಾಯಿತು. ನಂತರ ಸಂಜೆ 5.30 ರಿಂದ 6ರವರೆಗೆ ಉತ್ತಮ ಮಳೆ ಸುರಿಯಿತು. ಮಳೆಯಿಂ ದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಜನರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡಿದರು.