ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರ ‘ಗೊನೆ’ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಪ್ರೊ.ಕಾಳೇಗೌಡ ನಾಗವಾರ, ನಾ.ದಿವಾಕರ, ಹೊರೆಯಾಲ ದೊರೆಸ್ವಾಮಿ, ಕೆ.ಎಂ.ಕೀರ್ತಿರಾಜ್ ಇತರರಿದ್ದರು.
ಮೈಸೂರು: ಜನಪರ ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರ ಗೊನೆ (ಸಾಹಿತ್ಯ ಸಾಂಸ್ಕೃತಿಕ ಲೇಖನಗಳ ಸಂಗ್ರಹ) ಕೃತಿಯ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು.
ನಗರದ ಕುವೆಂಪುನಗರದಲ್ಲಿರುವ ರಂಗಾತರಂಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಕೃತಿಯನ್ನು ಬಿಡುಗಡೆ ಮಾಡಿದರು.
ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಹೊರೆಯಾಲ ದೊರೆಸ್ವಾಮಿ ಅವರದ್ದು, ಸಂತನ ವ್ಯಕ್ತಿತ್ವ. ಇಂತಹ ಪ್ರತಿಭಾವಂತ ಜ್ಞಾನಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆ ನೀಡಲಿಲ್ಲ. ಅಂದಿಗೆ ವಿಶ್ವವಿದ್ಯಾಲಯದಲ್ಲಿ ಹಲವರು ಪ್ರಗತಿಪರರು ಕೆಲಸ ನಿರ್ವಹಿಸಿದ್ದರು. ಆದರೂ, ದೊರೆಸ್ವಾಮಿಗೆ ಹುದ್ದೆ ನೀಡದೆ ಇರುವುದು ಬೇಸರದ ಸಂಗತಿ ಎಂದರು. ದೊರೆಸ್ವಾಮಿ ಪ್ರಜ್ಞಾವಂತ ವ್ಯಕ್ತಿ. 63 ಕೃತಿಗಳನ್ನು ಬರೆದಿರುವುದು ಸಾಮಾನ್ಯ ವಿಚಾರವಲ್ಲ ಎಂದು ಶ್ಲಾಘಿಸಿದರು.
ಹಿರಿಯ ಲೇಖಕ ನಾ.ದಿವಾಕರ ಮಾತನಾಡಿ, ಗೊನೆ ಎಂದರೆ ಅದು ಹೂ, ಕಾಯಿ, ಹಣ್ಣುಗಳ ಗುಚ್ಛವಲ್ಲ. ಅದು ಅಕ್ಷರಗಳ ಮಾಲೆಯ ಗೊನೆ. ಅದೊಂದು ವಿಶ್ವಕೋಶ ಎಂದರು.
ಹೊರೆಯಾಲ ದೊರೆಸ್ವಾಮಿ ಅವರು ಧ್ವನಿಯಿಲ್ಲದ ಸಾಹಿತಿ. ಸಾಹಿತ್ಯ ಕ್ಷೇತ್ರದಲ್ಲಿ ಮೌನವಹಿಸಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ಯಂತ ವಿಚಾರ ಜ್ಞಾನಿ. ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅವರಿಗೆ ಅಪಾರ ಹಿಡಿತವಿದೆ. ಎಲ್ಲ ರೀತಿಯ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಚಾಕಚಕ್ಯತೆ ತೋರಿ ಸಾಹಿತ್ಯದ ರಸದೌತಣವನ್ನು ನಮ್ಮ ಮುಂದಿಯಿಟ್ಟಿದ್ದಾರೆ ಎಂದು ಬಣ್ಣಿಸಿದರು.
ಗೊನೆ ಕೃತಿಯಲ್ಲಿ ವಿಷಯ ಗುಚ್ಛ ಸಮಾಜಶಾಸ್ತ್ರ ವಿಚಾರದ ಅಧ್ಯಯನಕಾರರಿಗೆ ಹಾಗೂ ಸಂಶೋಧಕರಿಗೆ ವಿಚಾರ ಕೊಂಡಿಯಂತೆ ಸದ್ಬಳಕೆಯಾಗುತ್ತದೆ. ಈ ಕೃತಿಯಲ್ಲಿ 12ನೇ ಶತಮಾನದ ಬಸವ ತತ್ವವನ್ನು ಹಾಗೂ ಇವತ್ತಿನ ಬಸವ ತತ್ತವನ್ನು ಒಳಗೊಂಡಂತೆ ನಿಜವಾದ ಬಸವತತ್ವದ ಬಗ್ಗೆ ಮಾತನಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಹೊರೆಯಾಲ ದೊರೆಸ್ವಾಮಿ, ರಂಗಾತರಂಗ ಮೈಸೂರು ಸಂಸ್ಥಾಪಕ ಕೆ.ಎಂ.ಕೀರ್ತಿರಾಜ್ ಮತ್ತಿತರರಿದ್ದರು.