ಮೈಸೂರು: ಜಯನಗರದ ಮನೆಯೊಂದರಲ್ಲಿ ಲಾಕರ್ ಕೊರೆದು 2.40 ಲಕ್ಷ ರೂ.ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ.
ಜಯನಗರ ನಿವಾಸಿ ಎಂ.ಎಲ್. ಮಮತಾ ನೀಡಿದ ದೂರಿನ ಪ್ರಕಾರ, ಜುಲೈ 23ರಂದು ಬೆಳಗ್ಗೆ 9.30ಕ್ಕೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಮನೆಯ ಕೀಲಿಯನ್ನು ಹೊರಗಡೆ ಶೂ ರ‌್ಯಾಕ್‌ನಲ್ಲಿ ಇಟ್ಟು ಹೋಗಿದ್ದು, ಮಕ್ಕಳು ಶಾಲೆಗೆ ಹಾಗೂ ಪತಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು.
ರಾತ್ರಿ 9.30ಕ್ಕೆ ಮನೆಗೆ ಹಿಂದಿರುಗಿದಾಗ ವಾರ್ಡ್‌ರೋಬ್‌ನಲ್ಲಿದ್ದ ಲಾಕರ್‌ಅನ್ನು ಯಾರೋ ಕೊರೆದು ಅದರಲ್ಲಿದ್ದ 30 ಗ್ರಾಂ ಚಿನ್ನ ಹಾಗೂ 100 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಕಳುವಾದ ಆಭರಣಗಳಲ್ಲಿ ನೆಕ್ಲೆಸ್, ಬ್ರೇಸ್‌ಲೆಟ್, ಪೆಂಡೆಂಟ್, ಓಲೆ, ಬಳೆ ಸೇರಿದಂತೆ ಹಲವು ಚಿನ್ನಾಭರಣಗಳು ಸೇರಿದ್ದವು. ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದರ್ ಬಾಹರ್: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ಆರು ಆರೋಪಿಗಳನ್ನು ಮೈಸೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜು.23ರಂದು ಮಧ್ಯಾಹ್ನ ಗುಡುಮಾದನಹಳ್ಳಿಯಿಂದ ಚಿಕ್ಕೇಗೌಡನಹುಂಡಿಗೆ ಹೋಗುವ ರಸ್ತೆಯಲ್ಲಿರುವ ಜಮೀನೊಂದರ ಸಮೀಪದ ಸಾರ್ವಜನಿಕ ಸ್ಥಳದ ಮೇಲೆ ದಾಳಿ ನಡೆಸಲಾಯಿತು. ದಾಳಿ ವೇಳೆ ಆರು ಜನರು ಪ್ಲಾಸ್ಟಿಕ್ ತಾಟಿನ ಮೇಲೆ ಕುಳಿತು ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಆಡುತ್ತಿದ್ದರು. ದಾಳಿ ವೇಳೆ ಜೂಜಾಟಕ್ಕೆ ಬಳಸಿದ್ದ 5,250 ನಗದು, ಇಸ್ಪೀಟ್ ಎಲೆಗಳು ಹಾಗೂ ಒಂದು ಪ್ಲಾಸ್ಟಿಕ್ ತಾಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.