ಚಿನ್ನಾಭರಣ, ಹುಂಡಿ ಹಣ ಕಳವು 
ಮೈಸೂರು

ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹುಂಡಿ ಹಣ ಕಳವು

ಹುಣಸೂರು: ಕಳೆದ ಮೂರು ದಿನಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು, ದೇವಾಲಯದ ಹುಂಡಿಹಣ ಕಳ್ಳತನವಾಗಿದ್ದು, ಬೀಗ ಹಾಕಿರುವ ದೇವಾಲಯ ಮತ್ತು ಮನೆಗಳೇ ಕಳ್ಳರ ಟಾರ್ಗೆಟ್ ಆಗಿವೆ.
ತಾಲೂಕಿನ ಹನಗೋಡು ಹೋಬಳಿ ಕಡೇಮನುಗನಹಳ್ಳಿ ಗ್ರಾಪಂ.ವ್ಯಾಪ್ತಿಯ ಹೆಬ್ಬಾಳ ಗ್ರಾಮದಲ್ಲಿ ಸಣ್ಣೇಗೌಡರ ಮನೆಯ ಬೀಗ ಮುರಿದು ಹಾಡಹಗಲೇ 150 ಗ್ರಾಂ. ತೂಕದ ಚಿನ್ನಾಭರಣಗಳು ಮತ್ತು 5 ಸಾವಿರ ರೂ. ನಗದು ಲೂಟಿ ಮಾಡಿದ್ದಾರೆ. ಮನೆಯವರೆಲ್ಲರೂ ಪಕ್ಕದ ಪಿರಿಯಾಪಟ್ಟಣದಲ್ಲಿದ್ದ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಇದೇ ಸಮಯ ನೋಡಿ ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮಾರಿಗುಡಿ ಬೀದಿಯ ಕೋಲನೂರು ಮಾರಮ್ಮ ದೇಗುಲದಲ್ಲಿ ರಾತ್ರಿ ವೇಳೆ ಬೀಗ ಒಡೆದು ದೇವರ ಮೇಲಿದ್ದ ಚಿನ್ನದ ತಾಳಿ ಮತ್ತು ಹುಂಡಿಯನ್ನು ಒಡೆದು ಹಣ ದೋಚಿದ್ದಾರೆ. ಹಾಗೆಯೇ ಬನ್ನೀಬೀದಿಯ ಬಂಡಿಕಾಳಮ್ಮ ದೇವಾಲಯದ ಬಾಗಿಲು ಮುರಿದು ದೇವರ ಮೇಲಿದ್ದ ಚಿನ್ನದ ತಾಳಿ ಮತ್ತು ಹುಂಡಿ ಒಡೆದು ಹಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಕರ್ ಉಪಯೋಗಿಸಿ: ಈ ಕುರಿತು ಮಾಹಿತಿ ನೀಡಿದ ನಗರಠಾಣೆ ಇನ್‌ಸ್ಪೆಕ್ಟರ್ ಶಿವಮಾದಯ್ಯ, ನಾಗರಿಕರು ಮನೆಯ ಮುಂಬಾಗಿಲಿಗೆ ಡೋರ್ ಲಾಕರ್ ಬಳಸಿ ಬೀಗ ಹಾಕುವುದು ಉತ್ತಮ. ಮತ್ತು ಮನೆಯಲ್ಲಿರುವ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಪದ್ಧತಿಯನ್ನು ಅನುಸರಿಸುವುದು ಕ್ಷೇಮ. ಮನೆಯವರೆಲ್ಲರೂ ಊರಿಗೆ ಹೋಗುವ ಪರಿಸ್ಥಿತಿ ಬಂದಾಗ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹಾಗೂ ಅಕ್ಕಪಕ್ಕದವರಿಗೂ ಮಾಹಿತಿ ನೀಡುವ ಕಾರ್ಯ ಮಾಡಬೇಕೆಂದು ನಾಗರಿಕರಲ್ಲಿ ಕೋರಿದ್ದಾರೆ.