ಮೈಸೂರು: ಎಸ್‌ಬಿಎಂ ಬಡಾವಣೆಯ ಮನೆಯೊಂದರಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯೊಳಗೆ ನುಗ್ಗಿದ ಕಳ್ಳರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 5 ಸಾವಿರ ರೂ.ನಗದು ದೋಚಿದ್ದಾರೆ.
ಬಡಾವಣೆ ನಿವಾಸಿ ಡಾ.ಟಿ. ಅಮರ್‌ನಾಥ್ ಶನಿವಾರ ರಾತ್ರಿ ಮನೆಯಿಂದ ಹೊರಟು ಬಿಳಿಕೆರೆಯಲ್ಲಿರುವ ತೋಟದ ಮನೆಗೆ ತೆರಳಿದ್ದರು. ಭಾನುವಾರ ತೋಟದ ಮನೆಯಲ್ಲಿಯೇ ಉಳಿದು ಸೋಮವಾರ ಬೆಳಗ್ಗೆ ಮನೆಗೆ ಆಗಮಿಸಿದಾಗ ಮನೆಯ ಗೇಟಿನ ಬೀಗ ಹಾಗೂ ಮನೆಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿ ಚಿನ್ನಾಭರಣ ದೋಚಿರುವುದು ಕಂಡುಬಂತು. ಮನೆಯಲ್ಲಿ 2 ಜೊತೆ ಚಿನ್ನದ ಓಲೆಗಳು, 2 ಚಿನ್ನದ ನೆಕ್ಲೆಸ್ ಹಾಗೂ 5 ಸಾವಿರ ನಗದು ಕಳುವಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು: ನಗರದ ಜಿಲ್ಲಾ ಕಾರಾಗೃಹ ಬಳಿಯ ಖಬರ್‌ಸ್ತಾನ್‌ನಲ್ಲಿ ಪ್ರಾರ್ಥನೆಗೆ ತೆರಳಿದ್ದ ವ್ಯಕ್ತಿಯೊಬ್ಬರ ಸ್ಕೂಟರ್ ಕಳುವಾಗಿದೆ. ಎನ್.ಆರ್. ಮೊಹಲ್ಲಾ ನಿವಾಸಿ ಸೈಯದ್ ಇರ್ಫಾನ್ ಎಂಬವರು ಜು.16 ರಂದು ಖಬರ್‌ಸ್ತಾನ್‌ಗೆ ಪ್ರಾರ್ಥನೆಗೆ ತೆರಳಲು ಸ್ಕೂಟರ್‌ಅನ್ನು ಗೇಟ್ ನಂ.8 ರ ಮುಂದೆ ನಿಲ್ಲಿಸಿದ್ದರು. ಪ್ರಾರ್ಥನೆ ಮುಗಿಸಿ ಬಂದು ನೋಡಿದಾಗ ಸ್ಕೂಟರ್ ಕಳುವಾಗಿರುವುದು ಕಂಡು ಬಂತು. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವುಗಳ ರಕ್ಷಣೆ: ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ವಶಕ್ಕೆ ಪಡೆದಿರುವ ಆಲನಹಳ್ಳಿ ಪೊಲೀಸರು ಒಟ್ಟು 34 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿ ಸೋಮವಾರ ಲಾರಿಯೊಂದು ನಿಂತಿತ್ತು. ಕರುನಾಡು ರಕ್ಷಣಾ ವೇದಿಕೆ ಯುವ ಘಟಕದ ರಾಜ್ಯಾಧ್ಯಕ್ಷ ಬಸವರಾಜು ಪರಿಶೀಲನೆ ಮಾಡುವ ಸಂದರ್ಭ ಚಾಲಕ ಸ್ಥಳದಿಂದ ಪರಾರಿಯಾದ. ತಕ್ಷಣ ಅವರು ಆಲನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಎಎಸ್‌ಐ ರಾಜಣ್ಣ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 26 ಹಸುಗಳು ಹಾಗೂ 8 ಎತ್ತುಗಳು ಇರುವುದು ಕಂಡುಬಂತು. ಲಾರಿಯನ್ನು ಆಲನಹಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.