ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ. ಪಿ. ಶಿವರಾಜು, ಡಾ.ಎಂ.ಶಾರದಾ, ಡಾ.ಎ.ಪುಷ್ಪಾ ಅಯ್ಯಂಗಾರ್ ಇನ್ನಿತರರಿದ್ದರು. 
ಮೈಸೂರು

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಅಪರ ಪ್ರಾದೇಶಿಕ ಆಯುಕ್ತ ಡಾ. ಪಿ.ಶಿವರಾಜು ಅಭಿಮತ

ಮೈಸೂರು: 

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪರಿಶ್ರಮ ಮತ್ತು ಚಿಂತನೆಯೊಂದಿಗೆ ಉನ್ನತ ಗುರಿ ಸಾಧಿಸಬೇಕು ಎಂದು ಅಪರ ಪ್ರಾದೇಶಿಕ ಆಯುಕ್ತ  ಡಾ. ಪಿ. ಶಿವರಾಜು ಹೇಳಿದರು.

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸ್ನೇಹ ಸಿಂಚನ ಪ್ರತಿಭಾ ಪುರಸ್ಕಾರ ಮತ್ತು ತರಗತಿ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿನಿಯರು ನೈತಿಕ ಮೌಲ್ಯ ಅಳವಡಿಸಿಕೊಂಡು ಶಿಕ್ಷಣದೊಂದಿಗೆ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಪಡೆದುಕೊಳ್ಳಲು ಪ್ರತಿಭೆ ಬಹಳ ಮುಖ್ಯ. ಜ್ಞಾನವಂತರಾಗಲು ವೈಯಕ್ತಿಕ ಕೊರತೆಗಳು ಮುಖ್ಯವಲ್ಲ. ಇಚ್ಛಾಶಕ್ತಿ ಮುಖ್ಯ. ಆಧುನಿಕ ಸಮಾಜದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಮರ್ಥರಾಗಬೇಕು. ಭವಿಷ್ಯ ಉತ್ತಮವಾಗಲು ನಿರಂತರ ಪರಿಶ್ರಮದ ಅವಶ್ಯಕತೆ ಇದೆ ಎಂದರು. 
ಸಮಾಜ ಸೇವಕಿ ಡಾ.ಎ.ಪುಷ್ಪಾ ಅಯ್ಯಂಗಾರ್ ಮಾತನಾಡಿ, ಮಹಿಳಾ ಶಿಕ್ಷಣದ ಮಹತ್ವದಾಗಿದ್ದು, ಯುವತಿಯರು ಸ್ವಾವಲಂಬಿಗಳಾಗಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಶ್ರೀನಟರಾಜ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಚ್.ವಿ.ಬಸವರಾಜು ಹಿನಕಲ್‌ಮಾತನಾಡಿ, ಸಂಸ್ಥೆಯು ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಪ್ರವೇಶಾತಿ ನೀಡಿ, ಉತ್ತಮ ಫಲಿತಾಂಶ ವಿದ್ಯಾರ್ಥಿನಿಯರು ಪಡೆಯುವಲ್ಲಿ ಅಧ್ಯಾಪಕರ ಉತ್ತೇಜನ, ಪ್ರೋತ್ಸಾಹ, ಮಾರ್ಗದರ್ಶನ ಶ್ರೇಷ್ಠವಾಗಿದೆ. ಇದನ್ನು ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲೆ ಡಾ.ಎಂ.ಶಾರದಾ ಮಾಡನಾಡಿ, ಸಂಸ್ಕಾರವಂತರಾಗಲು ಗುರು, ಮತ್ತು ಗುರಿ ಬೇಕು. ನಮ್ಮ ಕಾಲೇಜು ಶೈಕ್ಷಣಿಕ ಗುರಿಯನ್ನು ಈಡೇರಿಸುತ್ತದೆ ಎಂದರು.
ತರಗತಿ ಪ್ರತಿನಿಧಿಗಳಿಗೆ ಗಣ್ಯರು ಬ್ಯಾಡ್ಜ್‌ಗಳನ್ನು ನೀಡುವ ಮೂಲಕ ಪದಗ್ರಹಣ ಮಾಡಿದರು. ನಂತರ ಎಲ್ಲ ತರಗತಿ ಪ್ರತಿನಿಧಿಗಳ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. 2025-26ನೇ ಸಾಲಿನಲ್ಲಿ ಮೂರು ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಪುರಸ್ಕಾರಿಸಲಾಯಿತು. ಸಂಚಾಲಕ ಡಾ.ಜಿ.ಪ್ರಸಾದಮೂರ್ತಿ ಇದ್ದರು.