ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪರಮೇಶ್, ಮೋಹನ್‌ಕುಮಾರಿ, ಎಂ.ಕೆ.ಮಲ್ಲೇಶ್, ಎಚ್.ಎಸ್.ಗಿರಿಜಾಂಬ, ಮಂಜುನಾಥ್, ಲೋಕೇಶ್, ಪ್ರಕಾಶ್, ವಿರೂಪಾಕ್ಷ, ರಮ್ಯಾ ಇದ್ದರು.
- ಕಾಯ್ದೆ ಬಗ್ಗೆ ತಿಳಿದುಕೊಂಡು ನಿಯಮಾನುಸಾರ ಅನುಷ್ಠಾನಗೊಳಿಸಬೇಕು
- ಅರಣ್ಯ ವಾಸಿಗಳು ಕೆಲ ಮೂಲಸೌಲಭ್ಯವನ್ನು ನೀಡುವ ಸಂಬಂಧ ಸರ್ಕಾರ ಕಾನೂನು ರೂಪಿಸಿದೆ
ಮೈಸೂರು:ಅರಣ್ಯದಂಚಿನಲ್ಲಿರುವ ಆದಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಿಕೊಡಲು ಅರಣ್ಯ ಹಕ್ಕು ಕಾಯ್ದೆಯಂತೆ ಹಕ್ಕುಪತ್ರ ನೀಡಲು ಎಲ್ಲ ಇಲಾಖೆಗಳು ಜಂಟಿಯಾಗಿ ಕ್ರಮಕೈಗೊಳ್ಳಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಅರಣ್ಯ ಹಕ್ಕು ಅನುಷ್ಠಾನ ಸಂಬಂಧಿಸಿದ ಸಿಬ್ಬಂದಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ವಾಸಿಗಳು ಕೆಲ ಮೂಲಸೌಲಭ್ಯವನ್ನು ನೀಡುವ ಸಂಬಂಧ ಸರ್ಕಾರ ಕಾನೂನು ರೂಪಿಸಿದೆ. ಕಾಯ್ದೆ ಬಗ್ಗೆ ತಿಳಿದುಕೊಂಡು ನಿಯಮಾನುಸಾರ ಅನುಷ್ಠಾನಗೊಳಿಸಬೇಕು. ಅದಕ್ಕೆ ಅನುಗುಣವಾಗಿ ಸೌಲಭ್ಯ ನೀಡಲು ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದರು.
ಸರಗೂರು ತಾಲೂಕು ತಹಸೀಲ್ದಾರ್ ಮೋಹನ್‌ಕುಮಾರಿ ಮಾತನಾಡಿ, ಸರಗೂರು ಹಾಗೂ ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಹೆಚ್ಚು ಅರಣ್ಯ ವಾಸಿಗಳು ವಾಸವಿದ್ದು ಹುಲಿ ದಾಳಿಗೆ ಆಗಾಗ್ಗೆ ಒಳಗಾಗುತ್ತಿದ್ದಾರೆ. ಆ ಜನರಿಗೆ ರಕ್ಷಣೆ ನೀಡಲು ಮೂಲಸೌಲಭ್ಯ ಕಲ್ಪಿಸಿಕೊಡಲು ಅರಣ್ಯ ಹಕ್ಕು ಕಾಯ್ದೆಯನ್ನು ಗ್ರಾಮ ಮಟ್ಟದಿಂದ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ಎಂ.ಕೆ.ಮಲ್ಲೇಶ್ ಮಾತನಾಡಿ, ಮೈಸೂರು ಜಿಲ್ಲೆಯ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಅರಣ್ಯ ಹಕ್ಕು ನೀಡುವುದು ಬಾಕಿ ಇದ್ದು, ಅವುಗಳನ್ನು ಇತ್ಯರ್ಥಪಡಿಸಬಲು ಯಾವ ದಾಖಲೆಗಳು ಅಗತ್ಯ ಇವೆ. ಪಿಡಿಒಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಉಪ ನಿರ್ದೇಶಕಿ ಎಚ್.ಎಸ್.ಗಿರಿಜಾಂಬ ಮಾತನಾಡಿ, ಪಿಡಿಒಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಂತಹ ತರಬೇತಿಗಳ ಅವಶ್ಯಕತೆ ಇದೆ. ಇದರಿಂದ ಬುಡಕಟ್ಟು ಜನರಿಗೆ ಮೂಲಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ ಎಂದರು.
ಹುಣಸೂರು ತಹಸೀಲ್ದಾರ್ ಮಂಜುನಾಥ್, ಮಳವಳ್ಳಿ ತಹಸೀಲ್ದಾರ್ ಲೋಕೇಶ್, ಪಾಂಡವಪುರ ತಹಸೀಲ್ದಾರ್ ಪ್ರಕಾಶ್, ಭೂದಾಖಲೆಗಳ ಜಂಟಿ ನಿರ್ದೇಶಕರಾದ ವಿರೂಪಾಕ್ಷ, ರಮ್ಯಾ, ಇಒ ಪ್ರೇಮ್‌ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ವೈ.ಗಿರಿರಾವ್, ಪ್ರಿಯಾಂಕ್, ಕೃಷ್ಣಮೂರ್ತಿ, ದಿನೇಶ್, ತಾಲೂಕು ಕಲ್ಯಾಣಾಧಿಕಾರಿಗಳು ಇದ್ದರು.