books 
ಮೈಸೂರು

ಮೊಬೈಲ್ ಮೋಹ ಬಿಟ್ಟು ಪುಸ್ತಕಗಳ ಒಲವು ಹೆಚ್ಚಿಸಿಕೊಳ್ಳಿ

ಮೈಸೂರು: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಮುಳುಗದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸೇಂಟ್ ಫಿಲೋಮಿನಾ ವಿದ್ಯಾಸಂಸ್ಥೆಗಳ ರೆಕ್ಟರ್ ಡಾ.ಲೂರ್ದ್ ಪ್ರಸಾದ್ ಜೋಸೆಫ್ ತಿಳಿಸಿದರು.
ಸೇಂಟ್ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗ, ನವ ಕರ್ನಾಟಕ ಪ್ರಕಾಶನ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಮೇಲಿನ ಆಸಕ್ತಿಯಿಂದ ವಿದ್ಯಾರ್ಥಿಗಳು ಪುಸ್ತಕಗಳ ಕಡೆ ಗಮನಹರಿಸುತ್ತಿಲ್ಲ. ಇಂತಹ ಬೆಳವಣಿಗೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ವಿದ್ಯಾರ್ಥಿಗಳು ಮೊಬೈಲ್ ಮೋಹಕ್ಕೆ ಒಳಗಾಗದೆ, ಪುಸ್ತಕಗಳ ಕಡೆ ಒಲವು ತೋರಿಸಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು ಎಂದರು.
ಹಿಂದಿನ ದಿನಗಳಲ್ಲಿ ಪುಸ್ತಕಗಳನ್ನು ಖರೀದಿ ಮಾಡಲು ಹಣವಿಲ್ಲದೇ, ಕಾಲೇಜುಗಳ ಗ್ರಂಥಾಲಯ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈಗ ಓದಲು ಪ್ರತಿ ಕಾಲೇಜಿನಲ್ಲಿ ಗ್ರಂಥಾಲಯ ಇದೆ. ವಿದ್ಯಾರ್ಥಿಗಳು ಪುಸ್ತಕಗಳ ಕಡೆ ಮುಖ ಮಾಡುವುದು ಕಡಿಮೆಯಾಗುತ್ತಿದೆ. ಇಂದಿನ ಯುಗಕ್ಕೆ ಜ್ಞಾನ ತುಂಬ ಮುಖ್ಯ ಎನ್ನುವುದನ್ನು ಮರೆಯಬಾರದು ಎಂದು ತಿಳಿಸಿದರು.
ಆಡಳಿತಾಧಿಕಾರಿ ಜ್ಞಾನಪ್ರಗಾಸಂ, ಪ್ರಾಂಶುಪಾಲ ಡಾ.ರವಿ ಜೆ.ಡಿ.ಸಲ್ಡಾನ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಟಿ. ಸದೆಬೋಸ್, ನವ ಕರ್ನಾಟಕ ಪ್ರಕಾಶನ ವ್ಯವಸ್ಥಾಪಕದ ಸತ್ಯ ನಾರಾಯಣ, ಕನ್ನಡ ವಿಭಾಗದ ಉಪನ್ಯಾಸಕರಾದ ಮೇರಿ ನಿವೇದಿತಾ, ಡಾ.ಎಸ್.ಶಿವರಾಜು ಮತ್ತಿತರರು ಇದ್ದರು.