- ಕರ್ನಾಟಕ ಪ್ರಜಾ ಪಾರ್ಟಿ-ರೈತ ಪರ್ವದ ಅಧ್ಯಕ್ಷ ಡಾ.ಬಿ.ಶಿವಣ್ಣ ಆಗ್ರಹ
ಮೈಸೂರು ತಾಲೂಕಿನಾದ್ಯಂತ ಗೋಮಾಳದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕೊಟ್ಟಿದ್ದರೂ ಹಕ್ಕುಪತ್ರ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ-ರೈತ ಪರ್ವದ ಅಧ್ಯಕ್ಷ ಡಾ.ಬಿ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.
ಎಚ್.ಡಿ.ಕೋಟೆ, ಸರಗೂರು, ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ ಹಾಗೂ ಕೆ.ಆರ್.ನಗರ ತಾಲೂಕುಗಳ ಸರ್ಕಾರದ ಗೋಮಾಳದಲ್ಲಿ ಸುಮಾರು 50-60 ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಎಲ್ಲ ರೈತರು ಜಮೀನಿನಲ್ಲಿದ್ದ ಗಿಡಗಂಟಿ ತೆರವುಗೊಳಿಸಿ, ಕೃಷಿಗೆ ಸಾಧ್ಯವಾಗುವಂತೆ ಜಮೀನು ಹದ ಮಾಡಿಕೊಳ್ಳಲು ಅಪಾರ ಕಷ್ಟ ಪಟ್ಟಿದ್ದಾರೆ. ಇವರಿಗೆ ಸಾಗುವಳಿ ಚೀಟಿ ನೀಡಿದ್ದರೂ ಸಹಾ ಹಕ್ಕುಪತ್ರ ನೀಡಿಲ್ಲ. ದುರಸ್ತಿಗಾಗಿ ಈ ರೈತರ ಕುಟುಂಬದವರು ತಾಲೂಕು ಕಚೇರಿಗಳಿಗೆ ಅಲೆದೂ ಸುಸ್ತಾಗುವಂತಾಗಿದೆ. ಕೇವಲ ಶುಲ್ಕ ಪಡೆದು ಕಾಲಹರಣ ಮಾಡುವುದಷ್ಟೇ ನಡೆದಿದೆ. ರೈತರ ಕುಟುಂಬದ ಸದಸ್ಯರಿಗೆ ದಾನಪತ್ರ, ಹಕ್ಕು ಬಿಡುಗಡೆ ಪತ್ರ, ವ್ಯವಸ್ಥಾಪತ್ರ, ವಿಭಾಗ ಪತ್ರ ನೀಡಲಾಗದೆ ಪರಿತಪಿಸುವಂತಾಗಿದೆ. ದುರಸ್ತಿಯಾಗದ ಕಾರಣ ಬೇರೊಬ್ಬರಿಗೆ ಮಾರಾಟ ಮಾಡುವುದೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಬಂಧಿಸಿದವರು ಈ ಕೂಡಲೇ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ಚೆಲುವರಾಜು, ಸಿಂಧುವಳ್ಳಿ ಶಿವಕುಮಾರ್, ಸಂದೀಪ್, ಮಂಜುನಾಥ್ ಕುಮಾರಸ್ವಾಮಿ ಇದ್ದರು.