ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು 
ಮೈಸೂರು

ಸ್ವಚ್ಛತಾ ಫೀಡ್‌ಬ್ಯಾಕ್ ನೀಡಿ

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ಕ್ಲೀನ್‌ಸಿಟಿ ಸ್ಪರ್ಧೆಯಲ್ಲಿ ಮೈಸೂರನ್ನು ಗೆಲ್ಲಿಸಿ
  • ಮೈಸೂರು ನಗರಕ್ಕೆ ದೊರೆಯಲಿದೆ 500 ಅಂಕ
ಸದೇಶ್ ಕಾರ್ಮಾಡ್ ಮೈಸೂರು
ದೇಶದ ಅತ್ಯುತ್ತಮ ಸ್ವಚ್ಛ ನಗರಗಳನ್ನು ಗುರುತಿಸಲು ಸ್ವಚ್ಛ ಸರ್ವೇಕ್ಷಣೆ ಪ್ರಾರಂಭಗೊಂಡಿದ್ದು, ಈ ಸರ್ವೇಕ್ಷಣೆಯಲ್ಲಿ ನಾಗರಿಕರು ಸಹ ಪಾಲ್ಗೊಂಡು ತಮ್ಮ ಅಮೂಲ್ಯವಾದ ಅಭಿಪ್ರಾಯ ದಾಖಲಿಸಬಹುದು. ನಾಗರಿಕರು ನೀಡುವ ಅಭಿಪ್ರಾಯ ನಗರದ ಸ್ವಚ್ಛತೆಯ ರ‌್ಯಾಂಕಿಂಗ್ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಈಗಾಗಲೇ ಸ್ವಚ್ಛ ಸರ್ವೇಕ್ಷಣೆ 2025-26ಕ್ಕೆ ಸಂಬಂಧಿಸಿದಂತೆ ಸಿಟಿಜನ್ ಫೀಡ್‌ಬ್ಯಾಕ್ ಪಡೆಯುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಮೈಸೂರಿಗರು ಸಹ ಈ ಸರ್ವೇ ಕಾರ್ಯದಲ್ಲಿ ಭಾಗವಹಿಸಬಹುದು. ನಾಗರಿಕರು https://cf.sbmurban.org/ ಅಥವಾ ಸ್ವಚ್ಛತಾ ಆ್ಯಪ್ ಮೂಲಕ ತಮ್ಮ ಫೀಡ್‌ಬ್ಯಾಕ್ ಅನ್ನು ನೀಡಬಹುದು. ಕೆಲವು ವರ್ಷಗಳ ಹಿಂದೆ ನಾಗರಿಕರು ಅಭಿಪ್ರಾಯವನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ವ್ಯಕ್ತಪಡಿಸಲು ಅವಕಾಶ ಇತ್ತು. ಆದರೆ, ಇದೀಗ ಕನ್ನಡ ಭಾಷೆಯಲ್ಲೂ ಅಭಿಪ್ರಾಯ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ.
https://cf.sbmurban.org/ ಓಪನ್ ಮಾಡಿ ತಕ್ಷಣ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಗರಿಕರು ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬಹುದು. ನಂತರ ರಾಜ್ಯ, ಜಿಲ್ಲೆ, ನಗರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಾಲಂಗಳನ್ನು ಭರ್ತಿ ಮಾಡಬೇಕು. ಬಳಿಕ ಸಿಟಿಜನ್ ಫೀಡ್‌ಬ್ಯಾಕ್ ನೀಡುವವರ ಹೆಸರು, ಲಿಂಗ, ವಯಸ್ಸಿನ ಮಾಹಿತಿ ನೀಡಬೇಕು. ಆದರೆ, ಇದಕ್ಕೆ ದಾಖಲೆಗಳನ್ನು ನೀಡುವ ಅವಶ್ಯಕತೆ ಏನು ಇಲ್ಲ. ‘ನೀವು ಈ ನಗರ/ಸ್ಥಳದ ನಿವಾಸಿಯಾಗಿದ್ದೀರಾ?’ ಎಂಬ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿದರೆ ಆ ನಂತರ ಪ್ರಶ್ನೋತ್ತರ ವಿಭಾಗ ತೆರೆದುಕೊಳ್ಳುತ್ತದೆ.
ಏನೆಲ್ಲ ಪ್ರಶ್ನೆಗಳು ಇರಲಿವೆ?
ಒಟ್ಟು 13 ಪ್ರಶ್ನೆಗಳನ್ನು ಕೇಳಲಾಗಿದ್ದು, ಪ್ರಶ್ನೆಗಳ ಕೆಳ ಭಾಗದಲ್ಲಿ ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗಿದ್ದು, ನಾಗರಿಕರು ಅವು ಗಳನ್ನು ಟಿಕ್ ಮಾಡುವ ಮೂಲಕ ಉತ್ತರಿಸಬಹುದು. ನಿಮ್ಮ ಮನೆ/ಶಾಪ್‌ನಿಂದ ಪ್ರತಿನಿತ್ಯ ಕಸ ಸಂಗ್ರಹಿಸಲಾಗುತ್ತಿದೆಯೇ? ಕಸವನ್ನು ತ್ಯಾಜ್ಯದ ಡಬ್ಬಕ್ಕೆ ಹಾಕುವ ಮುನ್ನ ಒಣ ಹಾಗೂ ಹಸಿ ಕಸವಾಗಿ ವಿಂಗಡಿಸಲಾಗುತ್ತಿದೆಯೇ? ಕಸ ಸಂಗ್ರಹಿಸುವ ವಾಹನದಲ್ಲಿ ನೀವು ನೀಡುವ ತ್ಯಾಜ್ಯವನ್ನು ಹಸಿಕಸ ಹಾಗೂ ಒಣಕಸವಾಗಿ ವಿಂಗಡಿಸಿ ಕೊಂಡೊಯ್ಯುತ್ತಾರಾ ಅಥವಾ ಮಿಶ್ರಣ ಮಾಡುತ್ತಾರಾ? ನಿಮ್ಮ ಪ್ರದೇಶದಲ್ಲಿ ದಿನನಿತ್ಯ ಸ್ವೀಪಿಂಗ್ ನಡೆಯುತ್ತಿದೆಯೇ? ಸ್ವಚ್ಛತೆ ಕುರಿತು ನಿಮ್ಮ ನಿವಾಸದ ಪ್ರದೇಶವನ್ನು ನೀವು ಹೇಗೆ ಅಂಕಿತ ಮಾಡುತ್ತೀರಿ? ನಿಮ್ಮ ಪ್ರದೇಶದ ಹತ್ತಿರ ನಿರೀಕ್ಷೆ ಮಾಡದ ಕಸದ ಗುಡ್ಡಗಳನ್ನು ನೀವು ಎಷ್ಟು ಬಾರಿ ನೋಡಿದ್ದೀರಿ?
ಮಾರುಕಟ್ಟೆ, ಬಜಾರ್, ಉದ್ಯಾನಗಳು ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡುವಲ್ಲಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ? ಸಾರ್ವಜನಿಕ ಸ್ಥಳಗಳಲ್ಲಿ ಶೌಚ ಮಾಡುತ್ತಿರುವುದನ್ನು ನೋಡಿದ್ದೀರಾ? ನಿಮ್ಮ ಪ್ರದೇಶದ ಸಾರ್ವಜನಿಕ ಶೌಚಗೃಹಗಳ ಸ್ವಚ್ಛತೆ ಮತ್ತು ನಿರ್ವಹಣೆ ಕುರಿತು ನೀವು ಎಷ್ಟು ತೃಪ್ತರಾಗಿದ್ದೀರಿ? ನಗರದಲ್ಲಿ ಕಡಿಮೆ ಮಾಡಿ, ಮರು ಬಳಕೆ ಮಾಡಿ ಹಾಗೂ ಮರು ಪ್ರಯೋಜನ ಮಾಡಿ (ಆರ್‌ಆರ್‌ಆರ್) ಕೇಂದ್ರಗಳ ಬಗ್ಗೆ ನಿಮಗೆ ತಿಳಿದಿದೆಯೇ? ನಿಮ್ಮ ಸೆಪ್ಟಿಕ್ ಟ್ಯಾಂಕ್ ಶುದ್ಧೀಕರಣಕ್ಕೆ ನೀವು ಯಾರನ್ನ ಸಂಪರ್ಕಿಸುತ್ತೀರಿ? ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳಿಗೆ ನೀವು ರೀತಿ ವರದಿ ಮಾಡುತ್ತೀರಿ? ಸ್ವಚ್ಛತೆಯ ಸಂಬಂಧಿತ ನಿಮ್ಮ ದೂರುಗಳಿಗೆ ನಗರ ಸ್ಥಳೀಯ ಸಂಸ್ಥೆಯ ಪ್ರತಿಕ್ರಿಯೆಯನ್ನು ನೀವು ಹೇಗೆ ಅಂಕಿತ ಮಾಡುವಿರಿ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಮೊಬೈಲ್‌ಗೆ ಬಂದಿರುವ ಓಟಿಪಿಯನ್ನು ನಮೂದಿಸಿ ಸಬ್ಮಿಟ್ ನೀಡಿದರೆ ಫೀಡ್‌ಬ್ಯಾಕ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಬಾರಿಯ ಸ್ವಚ್ಛ ಸರ್ವೇಕ್ಷಣೆ ಸ್ಪರ್ಧೆಯು 12,500 ಅಂಕಗಳಿಗೆ ನಡೆಯಲಿದೆ. ಈ ಪೈಕಿ ಸಿಟಿಜನ್ ಫೀಡ್‌ಬ್ಯಾಕ್‌ಗೆ 500 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ

ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆಯಿತು. 2024-25ನೇ ಸಾಲಿನಲ್ಲಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದುಕೊಂಡಿತ್ತು. ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದ ನಗರಗಳನ್ನು ರ‌್ಯಾಂಕಿಂಗ್ ವ್ಯಾಪ್ತಿಗೆ ಒಳಪಡಿಸಲಿಲ್ಲ.
ಸ್ವಚ್ಛ ಸರ್ವೇಕ್ಷಣೆಯ ಸಿಟಿಜನ್ ಫೀಡ್‌ಬ್ಯಾಕ್ ನೀಡುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ನಗರದ ಎಲ್ಲ ನಾಗರಿಕರು ಫೀಡ್‌ಬ್ಯಾಕ್ ನೀಡುವ ಮೂಲಕ ನಗರ ಈ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸ್ಥಾನ ಪಡೆಯಲು ಸಹಕಾರ ನೀಡಬೇಕು. ಸ್ವಚ್ಛ ಸರ್ವೇಕ್ಷಣೆ ಈಗಾಗಲೇ ಪ್ರಾರಂಭಗೊಂಡಿದ್ದು, ಕೇಂದ್ರದಿಂದ ತಂಡ ಸೋಮವಾರದ ನಂತರ ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ನಗರ ಪಾಲಿಕೆಯಿಂದ ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಮೃತ್ಯುಂಜಯ, ಆರೋಗ್ಯಾಧಿಕಾರಿ, ನಗರ ಪಾಲಿಕೆ