ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಶಾಲೆ ಶಿಕ್ಷಕರು ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಸಕ ಡಿ.ರವಿಶಂಕರ್, ಬಿಇಒ ಆರ್.ಕೃಷ್ಣಪ್ಪ, ಉದಯಕುಮಾರ್ ಇತರರು ಇದ್ದರು.
ಕೆ.ಆರ್.ನಗರ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ನಿರೀಕ್ಷಿಸಿದ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ, ಆದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿರುವುದಕ್ಕೆ ಶಿಕ್ಷಣ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಶಾಲೆಗಳಿಗೆ ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೇವಲ ಶೇ.0.1 ಅಂತರದಲ್ಲಿ 8ನೇ ಸ್ಥಾನಕ್ಕೆ ಹೋಗಿದ್ದೇವೆ. ಮುಂದಿನ ಬಾರಿ ಉತ್ತಮ ಸಾಧನೆ ಮಾಡಲು ಬೇಕಾಗುವ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕೆಂದು ಸೂಚಿಸಿದ ಶಾಸಕರು, ಸ್ಪರ್ಧಾತ್ಮಕ ಯುಗದಲ್ಲಿ ಶೇ. 0.1 ಕೂಡ ಬಹಳ ಮುಖ್ಯ ಎಂದರು.
ವಿದ್ಯಾರ್ಥಿಗಳ ಅಂಕ ಗಳಿಕೆಗಾಗಿ ಬೋಧನೆ ಮಾಡುವ ಬದಲು ಅವರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು, ಓದಿನ ಕಡೆಗೆ ಹೆಚ್ಚು ಒತ್ತು ನೀಡುವ ಮೂಲಕ ಉತ್ತಮ ಶಿಕ್ಷಣ ಪಡೆದು ದೇಶದ ಬೆಳವಣಿಗೆಗೆ ತಮ್ಮದೆಯಾದ ಕೊಡುಗೆ ನೀಡಬೇಕೆಂದು ತಿಳಿಸಿದರು.
ಬಿಇಒ ಆರ್.ಕೃಷ್ಣಪ್ಪ ಮಾತನಾಡಿ, ಕೆ.ಆರ್.ನಗರ ಕ್ಷೇತ್ರ ಈ ಬಾರಿಯ ಫಲಿತಾಂಶದಲ್ಲಿ ಶೇ.92.81ರಷ್ಟು ಸಾಧನೆ ಮಾಡಿದ್ದು, ಜಿಲ್ಲೆಯಲ್ಲಿ 8ನೇ ಸ್ಥಾನ ಪಡೆದಿದ್ದು ಮಕ್ಕಳು ಗುಣತ್ಮಾಕ ಶಿಕ್ಷಣ ಪಡೆಯುವಲ್ಲಿ ಹೆಚ್ಚು ಸಾಧನೆ ಮಾಡಿದ್ದಾರೆ. ಉನ್ನತ ಶ್ರೇಣಿಯಲ್ಲಿ 398, ಪ್ರಥಮ ದರ್ಜೆಯಲ್ಲಿ 1,200, ದ್ವಿತೀಯ ದರ್ಜೆಯಲ್ಲಿ 500 ಮಕ್ಕಳು ತೇರ್ಗಡೆಗೊಂಡಿದ್ದು, ಒಂದೇ ವಿಷಯದಲ್ಲಿ 165 ವಿದ್ಯಾರ್ಥಿಗಳು ಅನುತ್ತೀರ್ಣವಾಗಿರುವುದು ಬೇಸರ ತಂದಿದೆ ಎಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉದಯಕುಮಾರ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ, ತಾಪಂ ಇಒಗಳಾದ ವಿ.ಪಿ.ಕುಲದೀಪ್, ಎನ್.ರವಿಕುಮಾರ್, ಬಿಆರ್‌ಸಿ ವೆಂಕಟೇಶ್ ಮಾತನಾಡಿದರು. ಉಪನಿರ್ದೇಶಕರ ಕಚೇರಿ ಮೀನಾಕುಮಾರಿ ಪಾಟೀಲ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಕ್ಷ್ಮೀಕಾಂತ್, ಮಧುಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಕೆ.ಜಗದೀಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಬಿ.ಕುಮಾರಸ್ವಾಮಿ, ಇಸಿಒ ದಾಸಪ್ಪ , ಜನಾರ್ಧನ್, ಸುಬ್ಬುರಾಮನ್, ಸಿಆರ್‌ಪಿ ಹರಿಪ್ರಸಾದ್ ಹಾಜರಿದ್ದರು.