ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಉದ್ಘಾಟಿಸಿದರು. ಡಿ.ಉದಯ್ ಕುಮಾರ್ , ಡಾ.ಎಂ.ಡಿ ಸುದರ್ಶನ್, ಶ್ರೀವಾಣಿ, ಲಕ್ಷ್ಮೀ, ರಮ್ಯಾ, ಅನಿತಾ, ಆನಂದ್ ಕುಮಾರ್, ರಮೇಶ್‌ಚಂದ್ರ, ಎ.ಪಿ. ಚಂದ್ರಶೇಖರ್ ಇತರರು ಇದ್ದರು. 
ಮೈಸೂರು

ಮಕ್ಕಳು ಗೆಲುವಿನ ಹಾದಿ ಸಾಗಲು ಸ್ವಾತಂತ್ರೃ ನೀಡಿ: ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಮಗುವನ್ನು ಪ್ರೋತ್ಸಾಹಿಸಿದರೆ ಮಕ್ಕಳು ಸಮರ್ಥ ಪ್ರಜೆಯಾಗಿ ಹೊರಹೊಮ್ಮುತ್ತಾರೆ
  • ಮಕ್ಕಳೂ ಸಹ ತಮ್ಮ ಓದಿನ ಬಗ್ಗೆ ಗಮನ ನೀಡಬೇಕು
  • ಉತ್ತಮ ವಿಚಾರಗಳನ್ನು ಆಸಕ್ತಿಯಿಂದ ಕಲಿಯಬೇಕು
ಮೈಸೂರು: ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು, ಅದನ್ನು ಸುಂದರಗೊಳಿಸಲು ಅವರ ಗೆಲುವಿನ ಹಾದಿಯಲ್ಲಿ ಸಾಗುವ ರೀತಿ ಸ್ವಾತಂತ್ರೃ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರದ ಕಿರುರಂಗ ಮಂಟಪದಲ್ಲಿ ಬುಧವಾರ ಆಯೋಜಿಸಲಾಗಿದ್ದ, ಕಲಾ ಪ್ರತಿಭೋತ್ಸವ 2025-26 ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅಭಿವೃದ್ಧಿಯಾಗಲು ಪ್ರೋತ್ಸಾಹ ಅಗತ್ಯ. ಪಾಲಕರು ತಮ್ಮ ಮಕ್ಕಳ ಬಗ್ಗೆ ಮತ್ತು ಅವರ ಜ್ಞಾನ ತಿಳಿವಳಿಕೆ ಮಟ್ಟ ಇವುಗಳ ಬಗ್ಗೆ ಯಾವಾಗಲೂ ಸಕಾರಾತ್ಮಕ ಭಾವನೆ, ಒಳ್ಳೆಯ ದೃಷ್ಟಿಕೋನ ಹೊಂದಿರಬೇಕು ಎಂದು ಹೇಳಿದರು. 
ಮಗುವಿನ ಮನಸ್ಸು ಆಗ ತಾನೇ ಅರಳುವ ಸಂದರ್ಭದಲ್ಲಿಯೇ ಶಾಲೆಗೆ ಸೇರಿಸುತ್ತೇವೆ. ಶಾಲೆ ಹಾಗೂ ಮನೆ ಎರಡರಲ್ಲೂ ಮಗುವನ್ನು ಪ್ರೋತ್ಸಾಹಿಸಿದರೆ ಮಕ್ಕಳು ಸಮರ್ಥ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ಮಕ್ಕಳು ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಮನೋ ಸ್ಥೈರ್ಯ ತುಂಬುವುದು ಪಾಲಕರು, ಶಿಕ್ಷಕರ ಕರ್ತವ್ಯವಾಗಿದೆ ಎಂದರು.
ಈ ಕಲಾ ಪ್ರತಿಭೋತ್ಸವ ಕಾರ್ಯಕಮವು ಮಕ್ಕಳು ಮತ್ತು ಯುವ ಜನತೆಯನ್ನು ಸಾಂಸ್ಕೃತಿಕ ಕ್ಷೇತ್ರದ ಕಡೆಗೆ ಬೆಳೆಯುವ ಯುವ ಕಲಾ ಪ್ರತಿಭೋತ್ಸವ ಕಾರ್ಯಕ್ರಮಗಳು ಹೆಚ್ಚು, ಹೆಚ್ಚು ನಡೆಯಬೇಕು ಎಂದರು.
 ರಾಷ್ಟ್ರಕವಿ ಕುವೆಂಪು ಅವರು ಈ ಜಗತ್ತಿಗೆ ಕಣ್ಣು ಬಿಟ್ಟು ಬರುವ ಪ್ರತಿಯೊಂದು ಮಗುವು ವಿಶ್ವ ಪ್ರಜೆಯಾಗಿರುತ್ತದೆ. ವಿಶ್ವ ಚೈತನ್ಯ ಅದರಲ್ಲಿ ಇರುತ್ತದೆ. ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಯಾವ ವಿಭಾಗದಲ್ಲಿ ಬೇಕಾದರೂ ಪರಿಪೂರ್ಣವಾಗಿ ವಿಕಾಸ ಹೊಂದಿ ತನ್ನ ಚೈತನ್ಯದ ಶ್ರೀಮಂತಿಕೆ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಪ್ರತಿಯೊಂದು ಮಗುವಿನಲ್ಲಿ ಇರುತ್ತದೆ ಎಂದು ಹೇಳಿದರು.
ಮಕ್ಕಳಲ್ಲಿರುವ ಧನಾತ್ಮಕ ಅಂಶ ಗುರುತಿಸಿ ಅವರನ್ನು ಪ್ರೊತ್ಸಾಹಿಸಿದಾಗ ಅವರ ಪ್ರದರ್ಶನ ಶಕ್ತಿ ಉತ್ತಮವಾಗುತ್ತದೆ. ಅದರ ಬದಲು ಮಕ್ಕಳನ್ನು ಕಡೆಗಣಿಸುವುದು, ಹೀಯಾಳಿಸುವುದು, ಬೇರೆಯವರೊಂದಿಗೆ ಹೋಲಿಸುವುದು ಮಾಡಿದಾಗ ಅವರು ಬೇರೆ ರೀತಿ ವರ್ತಿಸುತ್ತಾರೆ ಎಂದರು.
ಪಾಲಕರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದರ ಜತೆಗೆ ಕೆಲವು ನಿಯಂತ್ರಣವನ್ನೂ ಹಾಕಬೇಕು. ಮಕ್ಕಳು ತಮ್ಮ ವ್ಯಕ್ತಿತ್ವದ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇದಕ್ಕೆ ಪೂರಕವಾಗಿ ಮಕ್ಕಳೂ ಸಹ ತಮ್ಮ ಓದಿನ ಬಗ್ಗೆ ಗಮನ ನೀಡಬೇಕು. ಉತ್ತಮ ವಿಚಾರಗಳನ್ನು ಆಸಕ್ತಿಯಿಂದ ಕಲಿಯಬೇಕು ಎಂದು ತಿಳಿಸಿದರು.
  ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಉದಯ್ ಕುಮಾರ್ ಮಾತನಾಡಿ, ಮಕ್ಕಳೊಂದಿಗೆ ಸಂವಾದ ನಡೆಸಬೇಕು, ಅವರಲ್ಲಿ ಪಠ್ಯದ ಕುರಿತು ಆಸಕ್ತಿ ಹೆಚ್ಚಿಸಬೇಕು ಅವರ ಮನಸ್ಸನ್ನು ತಮ್ಮ ಬೋಧನೆಯತ್ತ ತಿರುಗಿಸಬೇಕು. ಅದು ಶಿಕ್ಷಕರಲ್ಲಿ ಮಾತ್ರ ಇರುವ ಕಲೆಯಾಗಿದ್ದು, ಶಿಕ್ಷಕರಲ್ಲಿ ಬದ್ಧತೆ ಅಗತ್ಯವಿದೆ ಎಂದರು. 
ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡದೇ ಅವರಲ್ಲಿನ ಪ್ರತಿಭೆ ಗುರುತಿಸಿ ಹೊರತರುವುದು ಶಿಕ್ಷಣದ ಸಮಗ್ರ ಭಾಗವಾಗಿ ಪ್ರತಿಭಾ ಕಾರಂಜಿ ಹೆಚ್ಚು ಸೂಕ್ತ ಎಂದರು.
ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಕಲಾ ವೇದಿಕೆಯು ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಬಹುಮಾನ ಸಿಗಲಿಲ್ಲ ಎಂಬ ಬೇಸರ ಬೇಡ, ಸ್ಪರ್ಧಿಸುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದರು.
ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ  ಸರ್ಕಾರ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ತೀರ್ಪುಗಾರರಾದ ಶ್ರೀವಾಣಿ, ಲಕ್ಷ್ಮೀ, ರಮ್ಯಾ, ಅನಿತಾ, ಆನಂದ್ ಕುಮಾರ್, ರಮೇಶ್‌ಚಂದ್ರ, ಎ.ಪಿ.ಚಂದ್ರಶೇಖರ್ ಇತರರು ಇದ್ದರು.