ಹುಣಸೂರು ತಾಲೂಕಿನ ಬಿಳಿಗೆರೆಯ ಅನ್ವೇಷಣಾ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂಶಿ ಪ್ರಸನ್ನಕುಮಾರ್, ಎಚ್.ಕೆ.ಚಂದ್ರಮೋಹನ್, ಎಚ್.ಎನ್. ಗಿರೀಶ, ಎಚ್.ಸಿ.ಪ್ರಶಾಂತ್, ನಂಜುಂಡಶೆಟ್ಟಿ, ಆಶಾನಂದೀಶ್ ಇತರರು ಇದ್ದರು.
- ಸಂಸ್ಕೃತಿಯನ್ನು ಉಳಿಸುವ ಜತೆಗೆ ಉತ್ತಮ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿರುವುದು ಹೆಮ್ಮೆಯ ವಿಷಯ
- ಪಾಲಕರು ಧಾರಾವಾಹಿಗಳನ್ನು ನೋಡುವುದನ್ನು ನಿಲ್ಲಿಸಿ ಪುಸ್ತಕಗಳನ್ನು ಹಿಡಿಯಿರಿ
ಮೈಸೂರು:ಸಂಸ್ಕಾರ ಸಂಸ್ಕೃತಿ ಎಲ್ಲೋ ಒಂದು ಕಡೆ ನಶಿಸಿ ಹೋಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಅದನ್ನು ಉಳಿಸುವಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ ಹೇಳಿದರು.
ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿರುವ ಅನ್ವೇಷಣಾ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕಲಾ ಸಂಸ್ಕೃತಿ ಸಂಭ್ರಮ ಹಾಗೂ ಆಶೀರ್ವಾದ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿ, ಕೃತಕ ಬುದ್ದಿಮತ್ತೆಯ ಯುಗದಲ್ಲಿ ಅನ್ವೇಷಣಾ ಶಿಕ್ಷಣ ಸಂಸ್ಥೆಯು ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವ ಜತೆಗೆ ಉತ್ತಮ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುತ್ತಿರುವ ಸಂಸ್ಥೆ ಅನ್ವೇಷಣಾ ಶಿಕ್ಷಣ ಸಂಸ್ಥೆಯಾಗಿದ್ದು, ಪ್ರತಿ ವರ್ಷ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಾಗ ಅನ್ವೇಷಣಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು
ಪಾಲಕರು ಧಾರಾವಾಹಿಗಳನ್ನು ನೋಡುವುದನ್ನು ನಿಲ್ಲಿಸಿ ಪುಸ್ತಕಗಳನ್ನು ಹಿಡಿಯಿರಿ. ಏಕೆಂದರೆ ಮಕ್ಕಳು ನಾವು ಏನು ಹೇಳುತ್ತೇವೆ ಎಂಬುದಕ್ಕಿಂತ ಹೆಚ್ಚಾಗಿ ನಾವು ಏನು ಮಾಡುತ್ತೇವೆಯೋ ಅದನ್ನು ಅನುಸರಿಸುತ್ತಾರೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಕೃಷಿ ಮಾರಾಟ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಅನ್ವೇಷಣಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಚ್.ಕೆ.ಚಂದ್ರಮೋಹನ್ ಮಾತನಾಡಿ, ನಾನೊಬ್ಬ ಹಿರಿಯ ವ್ಯಕ್ತಿಯಾಗಿ ಎಲ್ಲ ಪಾಲಕರು ಆಸ್ತಿ ಮಾಡದಿದ್ದರೂ ಪರವಾಗಿಲ್ಲ, ದಿನದ 24 ಗಂಟೆಯಲ್ಲಿಅರ್ಧ ಗಂಟೆಯಾದರೂ ನಿಮ್ಮ ಮಕ್ಕಳಿಗೆ ಮೀಸಲಿಡಿ ಎಂದರು.
ಮಕ್ಕಳಿಗೆ ಶಿಕ್ಷಣ ದೊರೆಯುವುದು ಸುತ್ತಲ ಪರಿಸರದಿಂದ. ಹೀಗಾಗಿ ಮೊದಲು ಪಾಲಕರಾದ ನಾವು ಬದಲಾಗೋಣ, ಸುತ್ತಲ ಪರಿಸರದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕುತೂಹಲ ಕೆರಳುವ ಸನ್ನಿವೇಶವನ್ನು ನಿರ್ಮಿಸೋಣ. ಆನಂತರ ಮಕ್ಕಳ ಬದಲಾವಣೆ ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಒಂದು ಲಕ್ಷ ರೂ. ಹಾಗೂ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಪ್ರಥಮ ಐದು ರ‌್ಯಾಂಕ್‌ಗಳಲ್ಲಿ ಒಂದು ರ‌್ಯಾಂಕ್ ಪಡೆದ ವಿದ್ಯಾರ್ಥಿಗೆ ಐವತ್ತು ಸಾವಿರ ನಗದು ಬಹುಮಾನ ಕೊಡುವುದಾಗಿ ಘೋಷಿಸಿದರು.
ಸಂಸ್ಥೆಯ ಅಧ್ಯಕ್ಷರೂ ಆದ ಪ್ರಾಂಶುಪಾಲ ಎಚ್.ಎನ್.ಗಿರೀಶ ಮಾತನಾಡಿ, ಪದವಿ ಪೂರ್ವ ಕಾಲೇಜಿನಿಂದ ಒಟ್ಟು 408 ವಿದ್ಯಾರ್ಥಿಗಳು ಹೊರ ಬಂದಿದ್ದು, ಅದರಲ್ಲಿ 406 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಪಬ್ಲಿಕ್ ಸ್ಕೂಲ್‌ನಿಂದ ಕಳೆದ ವರ್ಷ ಹತ್ತನೇ ತರಗತಿಯ ಪ್ರಥಮ ಫಲಿತಾಂಶವನ್ನು ನೀಡಿದ್ದು, ತಾಲೂಕಿನಲ್ಲಿ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿಯೇ ಅತ್ತುತ್ತಮ ಫಲಿತಾಂಶವನ್ನು ನೀಡಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಚ್.ಸಿ.ಪ್ರಶಾಂತ್ ವಿದ್ಯಾರ್ಥಿಗಳಿಗೆ ಶುಭಕೋರಿದರು. ವರ್ಷದ ಅತ್ಯುತ್ತಮ ಉಪನ್ಯಾಸಕರಾಗಿ ವಿಜ್ಞಾನ ವಿಭಾಗದಿಂದ ತೇಜಾ, ವಾಣಿಜ್ಯ ವಿಭಾಗದಿಂದ ಸುಪ್ರಿಯಾ, ಉತ್ತಮ ಶಿಕ್ಷಕಿಯಾಗಿ ಸೌಂದರ್ಯಾ ಅವರು ಬಹುಮಾನ ಪಡೆದರು. ಹಾಗೇ ಅತ್ಯುತ್ತಮ ವಿದ್ಯಾರ್ಥಿಗಳಾಗಿ ವಿಜ್ಞಾನ ವಿಭಾಗದಿಂದ ಚೆಲುವರಾಜ್, ವಾಣಿಜ್ಯ ವಿಭಾಗದಿಂದ ಸಂತೋಷ್, ಪ್ರೌಢಶಾಲಾ ವಿಭಾಗದಿಂದ ಕೀರ್ತನಾ, ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದ ಪ್ರಥಮ ಸ್ಥಾನಗಳಿಸಿದ್ದ ವಿದ್ಯಾರ್ಥಿಗಳು ಹಾಗೂ ವಿಷಯವಾರು ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ನಂಜುಂಡಶೆಟ್ಟಿ, ಸದಸ್ಯರಾದ ಜಯಮ್ಮ ನಂಜುಂಡಶೆಟ್ಟಿ, ಸರಸ್ವತಿ ಚಂದ್ರಮೋಹನ್, ಶಿಲ್ಪಾ ಗಿರೀಶ್ ಉಪಪ್ರಾಂಶುಪಾಲೆ ಆಶಾ ನಂದೀಶ್ ಇತರರು ಇದ್ದರು.