ಸಿಐಐಎಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಸ್ತ್ರೀಯ ಕನ್ನಡ ನಿತ್ಯೋತ್ಸವ ಅಂತರ್ಜಾಲ ಉಪನ್ಯಾಸ ಕಾರ್ಯಕ್ರಮವನ್ನು ಚಿಂತಕ, ವಿಮರ್ಶಕ ಪ್ರೊ.ರಹಮತ್ ತರೀಕೆರೆ ಉದ್ಘಾಟಿಸಿದರು. ಪ್ರೊ.ಶೈಲೇಂದ್ರ ಮೋಹನ್, ಪ್ರೊ.ಎನ್.ಎಂ. ತಳವಾರ, ಎಲ್.ಆರ್.ಪ್ರೇಮ್ ಕುಮಾರ್ ಇದ್ದರು.
- ಶಾಸ್ತ್ರೀಯ ಕೇಂದ್ರವೂ ರೂಪಾಂತರ ಪಡೆಯಬೇಕಿದೆ.
- ಸಮುದಾಯ ಮತ್ತು ಸಂಸ್ಕೃತಿ ಕಡೆಗೆ ಚಲಿಸಬೇಕಿದೆ.
- ಭಾಷೆ ಮತ್ತು ಸಾಹಿತ್ಯದ ಅತೀ ಭಾರದಿಂದ ಹೊರಬರಬೇಕು.
- ಅಕ್ಷರ ಕೇಂದ್ರದಿಂದ ಡಿಜಿಟಲ್ ಕಡೆ ಹೋಗಬೇಕಿದೆ
ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರಕ್ಕೆ ಸ್ವಾಯತ್ತತೆ ಬೇಕು ಹಾಗೂ ನಿರ್ದೇಶಕರನ್ನು ನಿಯೋಜಿಸಬೇಕು ಎಂದು ಚಿಂತಕ, ವಿಮರ್ಶಕ ಪ್ರೊ.ರಹಮತ್ ತರೀಕೆರೆ ಆಗ್ರಹಿಸಿದರು
69ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್) ಸಭಾಂಗಣದಲ್ಲಿ ಸೋಮವಾರ 52 ವಾರಗಳ ಕಾಲ ನಡೆದ ಶಾಸ್ತ್ರೀಯ ಕನ್ನಡ ನಿತ್ಯೋತ್ಸವ ಅಂತರ್ಜಾಲ ಉಪನ್ಯಾಸ ಸರಣಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಸಂಸ್ಕೃತಕ್ಕೆ 2532 ಕೋಟಿ ರೂ., ಉರ್ದು 800 ಕೋಟಿ ರೂ., ಹಿಂದಿ 426 ಕೋಟಿ ರೂ., ತಮಿಳು 113 ಕೋಟಿ ರೂ., ಕನ್ನಡ 34 ಕೋಟಿ ರೂ. ನೀಡಿದೆ. ಕನ್ನಡ ಭಾರತದ ಭಾಗವಲ್ಲವೇ? ಕೇಂದ್ರವನ್ನು ಕೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸ್ತ್ರೀಯ ಕನ್ನಡ ಕೇಂದ್ರ ಕಟ್ಟಲು ಮೂರು ಸಲಹೆಗಳನ್ನು ನೀಡಿದ ರಹಮತ್ ತರೀಕೆರೆ ಅವರು, ಶಾಸ್ತ್ರೀಯ ಕೇಂದ್ರವೂ ರೂಪಾಂತರ ಪಡೆಯಬೇಕಿದೆ. ಸಮುದಾಯ ಮತ್ತು ಸಂಸ್ಕೃತಿ ಕಡೆಗೆ ಚಲಿಸಬೇಕಿದೆ. ಭಾಷೆ ಮತ್ತು ಸಾಹಿತ್ಯದ ಅತೀ ಭಾರದಿಂದ ಹೊರಬರಬೇಕು. ಅಕ್ಷರ ಕೇಂದ್ರದಿಂದ ಡಿಜಿಟಲ್ ಕಡೆ ಹೋಗಬೇಕಿದೆ ಎಂದು ಸಲಹೆ ನೀಡಿದರು.
ಏಕ ಶಿಸ್ತು, ಅಂತರ್‌ಶಿಸ್ತಿನಿಂದ ಬಹುಶಿಸ್ತು ಕಡೆ ಹೋಗಬೇಕಿದೆ. ಕಲ್ಚರಲ್ ಸ್ಟಡಿಯನ್ನು ಬಹುಶಿಸ್ತಿಯವಾಗಿ ಮಾಡಬೇಕಿದೆ. ಗತ ಕೇಂದ್ರದಿಂದ ವರ್ತಮಾನಕ್ಕೆ ರೂಪಾಂತರಗೊಳ್ಳಬೇಕಿದೆ. ಶಾಸ್ತ್ರೀಯ ಭಾಷೆಯ ಕೃತಕವಾದ ಗಡಿಯನ್ನು ಹೊಡೆಯಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು 50 ವರ್ಷಗಳಿಂದ ಕನ್ನಡ ರತ್ನಕೋಶವನ್ನು(ಡಿಕ್ಷನರಿ) ಪರಿಷ್ಕರಿಸಿಲ್ಲ. ಗ್ರಾಮೀಣ ಪರಿಭಾಷೆಯ ಪದಗಳು ಸೇರ್ಪಡೆಯಾಗಿಲ್ಲ. ಡಿಕ್ಷನರಿಯನ್ನು ಡಿಜಿಟಲ್‌ಗೆ ರೂಪಾಂತರಿಸುವ ಕಾರ್ಯ ಜರೂರು ಆಗಿದೆ ಎಂದು ಹೇಳಿದರು.
ಭಾರತದ ಎಲ್ಲ ಭಾಷೆಗಳು ಶಾಸ್ತ್ರೀಯ ಭಾಷೆಗಳಾಗಿವೆ. ತಮಿಳಿಗೆ ಬಂದು ಕನ್ನಡಕ್ಕೆ ಬರದಿದ್ದಾಗ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದೆವು. ತುಳು, ಲಂಬಾಣಿಗೆ ಏಕೆ ಶಾಸ್ತ್ರೀಯ ಮಾನ್ಯತೆ ದೊರೆಯಲಿಲ್ಲ ಎಂದು ಪ್ರಶ್ನಿಸಲಿಲ್ಲ. ಭಾರತದ ಎಲ್ಲ ಭಾಷೆಗಳಿಗೆ ಏಕೆ ಮಾನ್ಯತೆ ಇಲ್ಲ ಎಂದು ರಹಮತ್ ತರೀಕೆರೆ ಪ್ರಶ್ನಿಸಿದರು.
ಸಂಶೋಧನೆಗಳು ಅಕ್ಷರ ಕೇಂದ್ರಿತವಾಗಿವೆ. ಶಾಸ್ತ್ರೀಯ ಕೆಲಸಗಳಿಗೆ ಯುವಕರನ್ನು ತಯಾರು ಮಾಡಬೇಕಿದೆ. ಶಾಸ್ತ್ರೀಯ ಕೇಂದ್ರಗಳು ಸೇರಿ ಎಲ್ಲ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು. ಉನ್ನತ ಶಿಕ್ಷಣಕ್ಕೆ ಆದ್ಯತೆ ಕೊಡುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ಹೇಳಿದರು.
ನವ ಸಂಶೋಧಕರನ್ನು ಕನ್ನಡ ಸಂಶೋಧನೆಗೆ ಪರಿಚಯಿಸಬೇಕಿದೆ. ಪ್ರಸ್ತುತ ನಾವೆಲ್ಲರೂ ಹಿರಿಯ ತಲೆಮಾರಿನ ವಿದ್ವಾಂಸರ ಸಂಶೋಧನೆಗಳ ಮೇಲಷ್ಟೇ ಅವಲಂಬಿತವಾಗಿದ್ದು, ಇದು ಬದಲಾಗಬೇಕು, ಹೊಸ ತಲೆಮಾರಿಗೆ ಮಾದರಿಯಾಗುವ ವಾಚಿಕೆಗಳ, ಕಮ್ಮಟಗಳ, ಅಧ್ಯಯನ ಶಿಬಿರಗಳ, ಹಳೆಗನ್ನಡ ಓದು, ಅರ್ಥೈಸುವಿಕೆ, ವಿಮರ್ಶೆ, ವಿಶಿಷ್ಟ ಸಾಹಿತ್ಯ ಅಧ್ಯಯನಗಳ ಓದು ಇವುಗಳ ಅವಶ್ಯಕತೆ ಕನ್ನಡಕ್ಕೆ ಬಹಳಷ್ಟಿದೆ ಎಂದರು.
ಕನ್ನಡ ಸಾಹಿತ್ಯವು ಅಕ್ಷರ ಮತ್ತು ಮುದ್ರಣ ಕೇಂದ್ರದಿಂದ ಡಿಜಿಟಲೈಸೇಶನ್ ಕಡೆಗೆ, ಏಕಶಿಸ್ತು ಮತ್ತು ಅಂತರ್ಶಿಸ್ತುಗಳಿಂದ ಬಹುಶಕ್ತಿಯ ಅಧ್ಯಯನಗಳ ಕಡೆಗೆ, ನುಡಿ ಕೇಂದ್ರಗಳಿಂದ ಸಂಗೀತ ಕೇಂದ್ರಗಳೆಡೆಗೆ ಪಲ್ಲಟಗೊಳ್ಳಬೇಕಿದೆ. ಏಕೆಂದರೆ ಜ್ಞಾನದ ವ್ಯಾಖ್ಯಾನ ಇಲ್ಲಿ ಬಹಳಷ್ಟು ಇರುವುದರಿಂದ ನಮಗೆ ನವ ಆಯಾಮಗಳು ಅಧ್ಯಯನಕ್ಕೆ ಸಿಗುತ್ತವೆ ಎಂದರು.
ಬಹುತ್ವದಲ್ಲಿ ಭಾರತದ ಅಸ್ತಿತ್ವ ಇದೆ. ಒಬ್ಬ ನಾಯಕ, ಒಂದು ಪಕ್ಷ, ಒಂದು ಭಾಷೆ ಎನ್ನುವುದಾದರೆ ಭಾರತ ಕುಸಿಯುತ್ತದೆ. ಕನ್ನಡಿಗರು ಕರ್ನಾಟಕ ಏಕೀಕರಣ ಮತ್ತು ಭಾರತದ ಸ್ವಾತಂತ್ರೃಕ್ಕೆ ಹೋರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಸಿಐಐಎಲ್‌ನ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ. ತಳವಾರ, ಎಲ್.ಆರ್. ಪ್ರೇಮ್‌ಕುಮಾರ್ ಇದ್ದರು.