ಅಮ್ಮ ವಸುಂಧರೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ ಪ್ರೊ.ನಂಜಯ್ಯ ಹೊಂಗನೂರು ಅವರಿಗೆ ಗುರುವಂದನೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಸುರೇಶ್ ಗೌತಮ್, ಡಾ. ಅಮ್ಮ ರಾಮಚಂದ್ರ, ಅಂಶಿ ಪ್ರಸನ್ನಕುಮಾರ್ ಇತರರಿದ್ದರು.
- ಪ್ರೊ.ಎಂ. ನಂಜಯ್ಯ ಹೊಂಗನೂರು ಅಭಿಮತ
- ಭಕ್ತಿಗೀತೆ ಧ್ವನಿಸುರಳಿ ಬಿಡುಗಡೆ
ಮೈಸೂರು: ಕುಟುಂಬದವರ ಜೀವನ ನಿರ್ವಹಣೆಗೆ ಬೇಕಾದ ಆಸ್ತಿಯಷ್ಟನ್ನೇ ಮಾಡಬೇಕು. ಅದಕ್ಕಿಂತ ಹೆಚ್ಚು ಮಾಡಬಾರದು. ಉಳಿದಿದ್ದನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಹೇಳಿದರು.
ಅಮ್ಮ ವಸುಂಧರೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ ಶನಿವಾರ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ‘ಏನು ಚಂದ... ಏನು ಅಂದ...ಏಳುಮಲೆಯಲಿ...ಮಹದೇಶ್ವರ ಸ್ವಾಮಿ’ ಭಕ್ತಿಗೀತೆ ಧ್ವನಿಸುರಳಿ ಬಿಡುಗಡೆ ಮಾಡಿ ಮಾತನಾಡಿದರು.
‘ಆಸ್ತಿ’ ಮಾಡಿ ಕುಟುಂಬದವರಿಗೆ ಬಿಟ್ಟು ಹೋಗುವುದಕ್ಕಿಂತ ಸಮಾಜಕ್ಕೆ ಏನಾದರೂ ’ಕೊಡುಗೆ’ ಕೊಟ್ಟು ಹೋಗುವುದು ಮುಖ್ಯ. ಈ ದೆಸೆಯಲ್ಲಿ ನಾನು ಸ್ವಗ್ರಾಮದಲ್ಲಿ ಮೂವತ್ತು ವರ್ಷಗಳ ಹಿಂದೆಯೇ ಶಾಲೆ ಆರಂಭಿಸಿದ್ದು, ಅಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ನವೋದಯ ಶಾಲೆಗಳಲ್ಲಿ ಪ್ರವೇಶ ಪಡೆದು, ಈಗ ಬೇರೆ ದೇಶಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ನನ್ನ ಮಾರ್ಗದರ್ಶನದಲ್ಲಿ ಈವರೆಗೆ 22 ವಿದ್ಯಾರ್ಥಿಗಳು ಪಿಎಚ್.ಡಿ ಮಾಡಿದ್ದಾರೆ. ಈ ರೀತಿಯ ಸನ್ಮಾನಗಳು ನನಗೆ ಇಷ್ಟವಿಲ್ಲ. ಆದರೂ ಸರಗೂರು ತಾಲೂಕಿನ ದೇವಲಾಪುರ ಎಂಬ ಹಳ್ಳಿಯಿಂದ ಬಂದು ಅಮೆರಿಕ ಮತ್ತಿತರ ರಾಷ್ಟ್ರಗಳಿಗೆ ಹೋಗಿ ಗಾಯನವನ್ನು ಪ್ರಸ್ತುತಪಡಿಸುತ್ತಿರುವ ಡಾ. ಅಮ್ಮ ರಾಮಚಂದ್ರ ಗುರುವನ್ನೇ ಮೀರಿಸಿದ ಶಿಷ್ಯ. ಹೀಗಾಗಿ ನನ್ನೊಂದಿಗೆ ಸಮಾಜದ ಇತರ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಗೌರವಿಸಬೇಕು ಎಂಬ ಷರತ್ತು ಹಾಕಿ ಸಮಾರಂಭಕ್ಕೆ ಒಪ್ಪಿದೆ ಎಂದರು.
ಎಸ್. ಜಾನಕಿ ಅವರಿಗೆ ಗೌರವ ಸಲ್ಲಿಸಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಅದರಲ್ಲೂ ಹೆಚ್ಚಿನ ಮಹಿಳೆಯರಿಗೆ ಅಭಿನಂದಿಸಿದ್ದನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ ಎಂದು ಅವರು ಭಾವುಕರಾದರು.
ಬೆಂಗಳೂರಿನ ಅಂಬೇಡ್ಕರ್‌ವಾದಿ ಡಾ.ಸುರೇಶ್ ಗೌತಮ್ ಅಭಿನಂದನಾ ಭಾಷಣ ಮಾಡಿ, ಪ್ರೊ.ನಂಜಯ್ಯ ಹೊಂಗನೂರು ಅವರಂತಹ ಗುರುಗಳ ವಿರಳ.
ಯಾವುದೇ ಹಿನ್ನೆಲೆ ನೋಡದೆ ಕೇವಲ ಪ್ರತಿಭೆಯನ್ನು ಮಾನದಂಡವಾಗಿ ಪರಿಗಣಿಸಿ, ಶಿಷ್ಯರನ್ನು ಗುರುತಿಸಿ, ಪ್ರೋತ್ಸಾಹಿಸುವ ಗುಣವುಳ್ಳವರು. ಸ್ವಾತಂತ್ರ್ಯಪೂರ್ವದಲ್ಲಿ ಜ್ಯೋತಿ ಬಾಫುಲೆ ಅವರು ಇದೇ ರೀತಿ ಅಕ್ಷರ ಇಲ್ಲದವರಿಗೆ ಅಕ್ಷರ ಕಲಿಸುವ ಕೆಲಸ ಮಾಡಿದರು. ಅವರಂತೆ ಪ್ರೊ.ನಂಜಯ್ಯ ಕೆಲಸ ಮಾಡುತ್ತಿದ್ದಾರೆ ಎಂದರು.
ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಡಾ.ಅಮ್ಮ ರಾಮಚಂದ್ರ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲಾಗಿದ್ದ ನನ್ನನ್ನು ನಂಜಯ್ಯ ಅವರು ಗುರುತಿಸಿ, ಎಂ.ಎ. ಜಾನಪದದಲ್ಲಿ ಪ್ರಥಮ ರ‌್ಯಾಂಕ್, ಚಿನ್ನದ ಪದಕ ಪಡೆಯುವಂತೆ ಮಾಡಿದರು.
ನಂತರ ಪಿಎಚ್.ಡಿಗೆ ಮಾರ್ಗದರ್ಶಕರಾಗಿ, ಡಾಕ್ಟರೇಟ್ ಪದವಿ ಸಿಗುವಂತೆ ಮಾಡಿದರು. ಇಂತಹ ಗುರುಗಳ ಋಣ ತೀರಿಸುವ ಉದ್ದೇಶದಿಂದ ಹಾಗೂ ಸಮಾಜಕ್ಕೆ ಗುರು- ಶಿಷ್ಯರ ಬಾಂಧವ್ಯ ಇನ್ನೂ ಕೆಲವೆಡೆ ಗಟ್ಟಿಯಾಗಿದೆ ಎಂಬ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಗುರುವಂದನೆ ಏರ್ಪಡಿಸಲಾಗಿದೆ ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಿವೃತ್ತ ಬಿಇಒ ಶಿವಕುಮಾರ್, ದೇವಮ್ಮ ದೇವಲಾಪುರ , ಎಂ.ಬಿ. ನಮ್ರತಾ ಇದ್ದರು. ನಗರದ ಹೆಸರಾಂತ ಕಲಾವಿದರು ಗೀತಗಾಯನ ನಡೆಸಿಕೊಟ್ಟರು.
ಇತ್ತೀಚೆಗೆ ನಿಧನರಾದ ಗಾಯಕಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಕಾರ್ಯಕ್ರಮ ಜು.12 ರಂದು ನಡೆಯಬೇಕಿತ್ತಾದರೂ ಎಸ್. ಜಾನಕಿ ಅವರ ನಿಧನದ ಗೌರವಾರ್ಥ ಮುಂದೂಡಲಾಗಿತ್ತು.
ಪ್ರಶಸ್ತಿ ಪುರಸ್ಕೃತರು: ಡಾ.ಜಿ.ಎಂ. ವಾಮದೇವ- ವಸುಂಧರೆ ನಕ್ಷತ್ರ, ಕ್ಯಾತನಹಳ್ಳಿ ಪ್ರಕಾಶ್- ಅಮ್ಮ ವಸುಂಧರೆ ಕಲಾಭೂಷಣ, ಎಚ್.ಎಲ್. ರಾಜರಾಜೇಶ್ವರಿ, ಎಂ.ಪಿ. ಗೀತಾ, ನಿಸರ್ಗ ವಿಸ್ಮಯ- ಗಾನ ವಸುಂಧರೆ, ಸಿ. ಮಹೇಶ್ವರಿ- ನೃತ್ಯ ವಸುಂಧರೆ, ಪದ್ಮಾವತಿ- ಸೇವಾ ವಸುಂಧರೆ, ಜಾಕಿ ಪ್ರತಾಪ್ ಎಸ್. ಸರಗೂರು- ಅಮ್ಮ ವಸುಂಧರೆ ಕಲಾರತ್ನ, ಪ್ರಶಸ್ತಿ ಪ್ರದಾನ ಮಾಡಲಾಯಿತು.