ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಶ್ರೀ ಪಾರ್ವತಿ ಸಮೇತ ಶ್ರೀ ಕಂಠೇಶ್ವರಸ್ವಾಮಿ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು. 
ಮೈಸೂರು

ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣ್ಯೋತ್ಸವ ವೈಭವ

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ
  • ಶ್ರದ್ಧಾ, ಭಕ್ತಿಯಿಂದ ನಮಿಸಿದ ಭಕ್ತರು
ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿ ಶ್ರೀ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಗಿರಿಜಾ ಕಲ್ಯಾಣೋತ್ಸವ ಬುಧವಾರ ರಾತ್ರಿ ಅದ್ದೂರಿಯಾಗಿ ಜರುಗಿತು.
ಶ್ರೀ ಕಂಠೇಶ್ವರಸ್ವಾಮಿ ಹಾಗೂ ಶ್ರೀ ಪಾರ್ವತಿ ಅಮ್ಮನವರಿಗೆ ಅಭಿಷೇಕ ಸೇರಿದಂತೆ ವಿಶೇಷವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಬಾಲಕಿಯರು ಕಪಿಲಾ ನದಿಯ ಘಟ್ಟದಲ್ಲಿ ಮಂಗಳ ಪೂಜೆಯೊಂದಿಗೆ ಕಳಸ ಕನ್ನಡಿ, ಮಂಗಳ ಸ್ನಾನ ನೆರವೇರಿಸಲಾಯಿತು. ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಸಂಜೆ ಕಾಶಿಯಾತ್ರೆ ಅಂಗವಾಗಿ ಉತ್ಸವಮೂರ್ತಿಗೆ ಹಸಿರು ಪಚ್ಚೆಹಾರ, ಮಹಾರಾಜರು ನೀಡಿದ ವಜ್ರ, ಮುತ್ತು,, ಚಿನ್ನದ ಆಭರಣಗಳು, ಜರಿ ವಸ್ತ್ರಗಳಿಂದ ಅಲಂಕಾರಿಸಿ, ಕಂಸಳೆ, ಡೋಲು ಕುಣಿತ ವೀರಗಾಸೆ, ಗಾಡಿ ಗೊಂಬೆ ಸೇರಿದಂತೆ ಕಲಾ ತಂಡಗಳೊಂದಿಗೆ ದೇವಾಲಯ ಸುತ್ತಲೂ ಪ್ರದಕ್ಷಿಣೆ ಮಾಡಲಾಯಿತು. ಸಂಜೆ 6.45ರಿಂದ 7.15ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕಲ್ಯಾಣ ಮಂಟಪ ಪ್ರವೇಶದ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಗಣಪತಿ ಹೋಮ, ಮಹಾಸಂಕಲ್ಪ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ ಬಳಿಕ ಪಾರ್ವತಿ ಅಮ್ಮನವರಿಗೆ ಮಾಂಗಲ್ಯ ಧಾರಣೆ, ದೀಪಾರಾಧನೆಯೊಂದಿಗೆ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಗಿರಿಜಾ ಕಲ್ಯಾಣ ಮಹೋತ್ಸ ಅದ್ದೂರಿಯಾಗಿ ಜರುಗಿತು.
ಕಲ್ಯಾಣೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಮೂಲೆಗಳಿಂದ ಭಕ್ತಸಾಗರವೇ ಹರಿದು ಬಂದಿತ್ತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಉಯ್ಯಲೋತ್ಸವ: ಶ್ರೀ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಉತ್ಸವಮೂರ್ತಿ ಉಯ್ಯಲೋತ್ಸವ ಸಂಭ್ರಮದಿಂದ ಜರುಗಿತು.