ಹುಣಸೂರು ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಹಿಳಾ ಕಾರ್ಯಕರ್ತರಿಗೆ ಗೌರಿಗಣೇಶ ಹಬ್ಬದ ಪ್ರಯುಕ್ತ ಹೊಸಬಟ್ಟೆಗಳನ್ನು ಗಣ್ಯರು ವಿತರಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ದೇವರಹಳ್ಳಿ ಸೋಮಶೇಖರ್, ಕಾಂತರಾಜು, ಬಿಳಿಕೆರೆ ಪ್ರಸನ್ನ ಇತರರಿದ್ದರು.
- ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ
ಹುಣಸೂರು : ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಮತದಾರರಿಗೆ ಅರಿವು ಮೂಡಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.
ಗೌರಿಗಣೇಶ ಹಬ್ಬದ ಪ್ರಯುಕ್ತ ನಗರದ ಬ್ರಾಹ್ಮಣರ ಬೀದಿಯ ಶ್ರೀರಾಘವೇಂದ್ರಸ್ವಾಮಿ ಮಠದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿದ್ದ ಹುಣಸೂರು ನಗರ ಮತ್ತು ಗ್ರಾಮಾಂತರ ಮಂಡಲದ ಕಾರ್ಯಕರ್ತರ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 3 ವರ್ಷಗಳಲ್ಲಿ ಜನವಿರೋಧಿ, ರೈತವಿರೋಧಿ ಮತ್ತು ಯುವಶಕ್ತಿಯ ವಿರೋಧಿಯಾಗಿಯೇ ನಡೆದುಕೊಂಡು ಬಂದಿದೆ. ಕೇಂದ್ರದಲ್ಲಿ ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಆದರೆ ಸರ್ಕಾರ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿ ನಲುಗುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಬೂತ್‌ಮಟ್ಟದಿಂದ ಆರಂಭಿಸಿ ತಾಲೂಕು ಹಂತದವರೆಗೆ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಮತ್ತು ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ತಿಳಿಸಿ ಅವರ ಮನಗೆಲ್ಲುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡ ದೇವರಳ್ಳಿ ಸೋಮಶೇಖರ್ ನೇತೃತ್ವದಲ್ಲಿ 400 ಪುರುಷರು ಮತ್ತು 50 ಮಹಿಳೆಯರಿಗೆ ಗೌರಿಗಣೇಶ ಹಬ್ಬದ ಪ್ರಯುಕ್ತ ಹೊಸಬಟ್ಟೆಗಳನ್ನು ಸಂಸದರು ವಿತರಿಸಿದರು.
ಜಿಲ್ಲಾಧ್ಯಕ್ಷ ಸುಬ್ಬಣ್ಣ, ತಾಲೂಕು ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ನಾರಾಯಣ, ತಾಲೂಕು ರೈತಮೋರ್ಚಾ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ನಾಗರಾಜ್ ಮಲ್ಲಾಡಿ, ಪ್ರಫುಲ್ಲ ಮಲ್ಲಾಡಿ, ಕಮಲಮ್ಮ, ವೆಂಕಟಮ್ಮ, ಸವಿತಾ ಚವಾಣ್, ಜಾಬಗೆರೆ ರಮೇಶ್, ಹನಗೋಡು ಮಂಜುನಾಥ್, ಸತೀಶ್ ಇತರರು ಇದ್ದರು.