ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಆಯೋಜಿಸಿದ್ದ ವಿಮೆ ಚೆಕ್ ಹಸ್ತಾಂತರ ಹಾಗೂ ಗ್ರಾಹಕರ ಸಭೆಯಲ್ಲಿ ಪಿಎಂಜೆಜೆಬಿವೈ ವಿಮೆ ಚೆಕ್ ಹಸ್ತಾಂತರ ಮಾಡಲಾಯಿತು. ಜಿ.ಮಧುಸೂದನ್, ಸತೀಶ್, ಜ್ಯೋತಿ ಇತರರು ಇದ್ದರು.
- ಜಿ.ಮಧುಸೂದನ್ ಸಲಹೆ
- ಗ್ರಾಹಕರ ಸಭೆ
ಬೆಟ್ಟದಪುರ: ಬ್ಯಾಂಕ್ ಗ್ರಾಹಕರು ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಚಪ್ಪರದಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಜಿ.ಮಧುಸೂದನ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಮೆ ಚೆಕ್ ಹಸ್ತಾಂತರ ಹಾಗೂ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಕಡಿಮೆ ಮೊತ್ತದ ಪ್ರೀಮಿಯಂ ಮೂಲಕ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ವಿಮಾ ಯೋಜನೆಗಳ ಬಗ್ಗೆ ಗ್ರಾಹಕರು ಅರಿವು ಹೊಂದಬೇಕು. ಅರ್ಹ ಗ್ರಾಹಕರು ಯೋಜನೆಗಳಿಗೆ ನೋಂದಣಿಯಾಗಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬ್ಯಾಂಕ್‌ನಿಂದ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ ಉತ್ತಮ ಸಾಲದ ದಾಖಲೆಯನ್ನು ಕಾಯ್ದುಕೊಳ್ಳಬೇಕು. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಬ್ಯಾಂಕ್‌ನ ವಿವಿಧ ಸೇವೆಗಳು ಹಾಗೂ ಸರ್ಕಾರಿ ಯೋಜನೆಗಳ ಕುರಿತು ಗ್ರಾಹಕರು ಮಾಹಿತಿ ಪಡೆದುಕೊಂಡು ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ಪಿಎಂಜೆಜೆಬಿವೈ ವಿಮಾ ಯೋಜನೆಗೆ ನೋಂದಣಿಯಾಗಿದ್ದ ಶಾಖೆಯ ಗ್ರಾಹಕಿ ಜ್ಯೋತಿ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಯೋಜನೆಯ ನಾಮಿನಿ ಸತೀಶ್ ಅವರಿಗೆ ಎರಡು ಲಕ್ಷ ರೂ. ಮೌಲ್ಯದ ವಿಮಾ ಚೆಕ್ ಅನ್ನು ಹಸ್ತಾಂತರಿಸಲಾಯಿತು. ನಗದು ಗುಮಾಸ್ತ ಜಾದಿ ಸಂದೀಪ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.